ನವದೆಹಲಿ: 2024-25ರ ಹಣಕಾಸು ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ₹42 ಸಾವಿರ ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್ ಮಾಡಿವೆ ಎಂದು ಕೇಂದ್ರ ಸರ್ಕಾರವು, ಲೋಕಸಭೆಗೆ ಸೋಮವಾರ ತಿಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ₹8,312 ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ₹8,061 ಕೋಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ₹6,344 ಕೋಟಿ ಮತ್ತು ಬ್ಯಾಂಕ್ ಆಫ್ ಬರೋಡಾ ₹5,925 ಕೋಟಿ ರೈಟ್‌ಆಫ್ ಮಾಡಿವೆ.
2023-24ರ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ₹1.14 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್ ಮಾಡಿದ್ದವು. ಇದು 2022-23ರಲ್ಲಿ ₹1.18 ಲಕ್ಷ ಕೋಟಿಯಷ್ಟಿತ್ತು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ತಿಳಿಸಿದ್ದಾರೆ.
'ಬ್ಯಾಂಕ್‌ಗಳು ತಮ್ಮ ಲೆಕ್ಕಪತ್ರ ಸರಿಪಡಿಸಿಕೊಳ್ಳಲು ಒತ್ತು ನೀಡುತ್ತವೆ. ತೆರಿಗೆ ಪ್ರಯೋಜನ ಪಡೆಯುವ ಜೊತೆಗೆ ಪರಿಣಾಮಕಾರಿಯಾಗಿ ಬಂಡವಾಳ ಬಳಸಿಕೊಳ್ಳಲು ಮುಂದಾಗುತ್ತವೆ. ಹಾಗಾಗಿ, ಆರ್‌ಬಿಐ ಮಾರ್ಗಸೂಚಿ ಮತ್ತು ಆಡಳಿತ ಮಂಡಳಿಗಳ ನೀತಿಗಳಿಗೆ ಅನುಗುಣವಾಗಿ ವಸೂಲಾಗದ ಸಾಲವನ್ನು ರೈಟ್‌ಆಫ್ ಮಾಡುತ್ತವೆ' ಎಂದು ವಿವರಿಸಿದ್ದಾರೆ.
ರೈಟ್‌ಆಫ್ ಮಾಡಿರುವ ಸಾಲವನ್ನು ತೀರಿಸುವ ಹೊಣೆಯು ಸಾಲ ಪಡೆದವರ ಮೇಲೆ ಇದ್ದೇ ಇರುತ್ತದೆ. ರೈಟ್‌ಆಫ್ ಆಗಿರುವ ಸಾಲದ ವಸೂಲಾತಿ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ. ಸಾಲ ಪಡೆದವರಿಗೆ ರೈಟ್‌ಆಫ್ ಮಾಡಿದ್ದರಿಂದಾಗಿ ಪ್ರಯೋಜನವೇನೂ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.