ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೆ 21, 22 ರಂದು ಕುವೈತ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಬುಧವಾರ ತಿಳಿಸಿದೆ.
ದ್ವಿಪಕ್ಷೀಯ ಸಂಬಂಧ ಮತ್ತು ಇಂಧನ ಸಹಕಾರ ವೃದ್ಧಿಗೆ ಮೋದಿ ಅವರು ಕುವೈತ್‌ಗೆ ತೆರಳುತ್ತಿದ್ದಾರೆ. ಈ ಮೂಲಕ 43 ವರ್ಷಗಳ ಬಳಿಕ ಪಶ್ಚಿಮ ಏಷ್ಯಾ ರಾಷ್ಟ್ರಕ್ಕೆ ಭಾರತದ ಪ್ರಧಾನಿ ನೀಡುತ್ತಿರುವ ಮೊದಲ ಭೇಟಿಯಾಗಿದೆ.
ಕುವೈತ್‌ನ ಅಮೀರ್, ಶೇಖ್ ಮಿಶಾಲ್ ಅಲ್ ಅಹ್ಮದ್ ಅಲ್ ಜಬೇರ್ ಅಲ್ ಸಬ್ಹಾ ಅವರ ಆಹ್ವಾನದ ಮೇರೆಗೆ ಮೋದಿ ಕುವೈತ್‌ಗೆ ತೆರಳುತ್ತಿದ್ದಾರೆ. ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಜತೆಗೆ ಕುವೈತ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಭೇಟಿಯು ಭಾರತ ಮತ್ತು ಕುವೈತ್ ನಡುವಿನ ಬಹುಮುಖಿ ಸಂಬಂಧವನ್ನು ಬಲಪಡಿಸಲು ನೆರವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
1981ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಕುವೈತ್‌ಗೆ ಭೇಟಿ ನೀಡಿದ್ದರು. ಅದಾದ ಬಳಿಕ 2009ರಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕುವೈತ್ ಪ್ರವಾಸ ಕೈಗೊಂಡಿದ್ದರು. 2013ರಲ್ಲಿ ಕುವೈತ್‌ನ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿ ಮತ್ತು ಕುವೈತ್ ದೊರೆ ಪರಸ್ಪರ ಭೇಟಿಯಾಗಿದ್ದರು.