ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ-2025 ಆರಂಭವಾಗಿದ್ದು, ಭಕ್ತರ ಸುರಕ್ಷತೆಗಾಗಿ 'ಆಯಂಟಿ ಡ್ರೋನ್ ಸಿಸ್ಟಮ್' ಅನ್ನು ನಿಯೋಜಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
'ಆಯಂಟಿ ಡ್ರೋನ್ ಸಿಸ್ಟಮ್' ಅನ್ನು ಸಕ್ರಿಯಗೊಳಿಸಲಾಗಿದ್ದು, ಮಹಾಕುಂಭ ಮೇಳ ನಡೆಯುವ ಸ್ಥಳದ ಸುತ್ತಮುತ್ತಲಿನ ಪರಿಧಿಯಲ್ಲಿ ಹಾರಾಡುವ ಅನುಮತಿ ಇಲ್ಲದೆ ಹಾರಾಟ ನಡೆಸಿದ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ.
'ಆಯಂಟಿ ಡ್ರೋನ್ ಸಿಸ್ಟಮ್' ಅನ್ನು ನಿರ್ವಹಿಸಲು ತಜ್ಞರನ್ನು ನಿಯೋಜಿಸಲಾಗಿದೆ. ತಜ್ಞರು ಕೇಂದ್ರ ಸ್ಥಳದಲ್ಲಿ ಕುಳಿತು ಸುತ್ತಮುತ್ತಲಿನ ಎಲ್ಲಾ ಡ್ರೋನ್‌ಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅಗತ್ಯವಿದ್ದರೆ, ಯಾವುದೇ ಅನುಮಾನಾಸ್ಪದ ಡ್ರೋನ್ ಅಥವಾ ಇತರೆ ಸಾಧನಗಳನ್ನು ನಿಷ್ಕ್ರಿಯಗೊಳಿಸುವ ಅಧಿಕಾರ ಹೊಂದಿರುತ್ತಾರೆ ಎಂದು ವಿವರಿಸಲಾಗಿದೆ.
ಅನುಮತಿಯಿಲ್ಲದೆ ಡ್ರೋನ್ ಹಾರಾಟ ನಡೆಸಿರುವ ನಿರ್ವಾಹಕರಿಗೆ ನೋಟಿಸ್ ನೀಡಲಾಗಿದೆ ಎಂದು ಹಿರಿಯರು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ಹೇಳಿದ್ದಾರೆ.
ಕುಂಭ ಮೇಳ ನಡೆಯುತ್ತಿರುವ ಪ್ರದೇಶದಲ್ಲಿ ಅನುಮತಿ ಇಲ್ಲದೆ ಯಾವುದೇ ಡ್ರೋನ್‌ಗಳ ಹಾರಾಟಕ್ಕೆ ಅನುಮತಿ ನೀಡುವುದಿಲ್ಲ. ಒಂದು ವೇಳೆ ಡ್ರೋನ್ ಹಾರಾಟ ನಡೆಸಬೇಕಾದ್ದಲ್ಲಿ ಪೊಲೀಸರಿಂದ ಅನುಮತಿ ಪಡೆಯಬೇಕು. ಅನುಮತಿಯಿಲ್ಲದೆ ಡ್ರೋನ್ ಹಾರಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜೇಶ್ ದ್ವಿವೇದಿ ಎಚ್ಚರಿಕೆ ನೀಡಿದ್ದಾರೆ.
ಈ ಬಾರಿಯ ಕುಂಭ ಮೇಳದಲ್ಲಿ ಪ್ರಪಂಚದಾದ್ಯಂತದ 45 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.