ಸಂಭಲ್ : ಸಂಭಲ್ ಪಟ್ಟಣದಲ್ಲಿ ಕೋಮುಗಲಭೆ ಹಿನ್ನೆಲೆಯಲ್ಲಿ 1978ರಿಂದಲೂ ಮುಚ್ಚಿದ್ದ ದೇವಸ್ಥಾನದ ಬೀಗವನ್ನು ಜಿಲ್ಲಾಡಳಿತ ತೆರೆಯಲಾಗಿದೆ. ದೇಗುಲದ ಬಳಿ ಇರುವ ಬಾವಿಯಲ್ಲಿ ಇಂದು (ಸೋಮವಾರ) ಮೂರು ವಿಗ್ರಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾವಿಯಲ್ಲಿನ ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸುವ ವೇಳೆ ಗಣೇಶ, ಭಗವಾನ್ ಕಾರ್ತಿಕೇಯ ಸೇರಿದಂತೆ ಮೂರು ವಿಗ್ರಹಗಳು ಪತ್ತೆಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ದೇಗುಲದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
'ಶಾಹಿ ಜಾಮಾ ಮಸೀದಿಯಿಂದ ಸ್ವಲ್ಪವೇ ದೂರದ ಅಂತರದಲ್ಲಿರುವ ಈ ದೇವಸ್ಥಾನವು ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಮ್ಮ ಗಮನಕ್ಕೆ ಬಂತು' ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದು ಭಸ್ಮ ಶಂಕರ ದೇವಸ್ಥಾನವಾಗಿದ್ದು, ಇಲ್ಲಿ ಹನುಮಂತನ ಮೂರ್ತಿ ಹಾಗೂ ಶಿವಲಿಂಗ ಇವೆ. 1978ರಲ್ಲಿ ನಡೆದ ಕೋಮುಗಲಭೆ ವೇಳೆ ಈ ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತು. ಅಲ್ಲದೇ, ಇಲ್ಲಿನ ಹಿಂದೂಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
'ಈ ಪ್ರದೇಶವನ್ನು ಪರಿಶೀಲಿಸುತ್ತಿದ್ದಾಗ ಇಲ್ಲಿ ದೇವಸ್ಥಾನವಿರುವುದು ನಮ್ಮ ಗಮನಕ್ಕೆ ಬಂತು. ತಕ್ಷಣ ನಾನು ಜಿಲ್ಲಾಡಳಿತದ ಗಮನಕ್ಕೆ ತಂದೆ' ಎಂದು ಈ ಪ್ರದೇಶದಲ್ಲಿ ವಿದ್ಯುತ್ ಕಳವು ವಿರುದ್ಧ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವಂದನಾ ಮಿಶ್ರಾ ತಿಳಿಸಿದ್ದಾರೆ.
ಇಲ್ಲಿನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಕೋರ್ಟ್ ಆದೇಶ ನೀಡಿದ ಬಳಿಕ ನ.24ರಂದು ನಡೆದ ಗಲಭೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಅದಾದ ಕೆಲವು ವಾರಗಳ ನಂತರ ಜಿಲ್ಲಾಡಳಿತವು ಈ ಮಸೀದಿಯ ಸುತ್ತಲಿನ ಪ್ರದೇಶದಲ್ಲಿ ಒತ್ತುವರಿ ತೆರವು ಹಾಗೂ ವಿದ್ಯುತ್ ಕಳವು ವಿರುದ್ಧ ಕಾರ್ಯಾಚರಣೆ ಕೈಗೊಂಡಿತ್ತು.