ಪೆಶಾವರ: ಪೂರ್ವ ಅಫ್ಗಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನ ಸೇನೆ ನಡೆಸಿದ ವಾಯುದಾಳಿಯಿಂದಾಗಿ ಮಹಿಳೆಯರು, ಮಕ್ಕಳು ಸೇರಿ 46 ಮಂದಿ ಸತ್ತಿದ್ದಾರೆ.
ಅಫ್ಗನ್ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತ್ರತ್ ಅವರು, ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಗಡಿಯಲ್ಲಿನ ತರಬೇತಿ ಸೌಲಭ್ಯವನ್ನು ನಾಶಪಡಿಸಲು ಹಾಗೂ ಒಳನುಸುಳುವಿಕೆ ತಡೆಯಲು ದಾಳಿ ನಡೆಸಲಾಗಿತ್ತು ಎಂದು ಪಾಕ್‌ನ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದರು.
ಈ ಮಧ್ಯೆ, ಪಾಕಿಸ್ತಾನಿ ತಾಲಿಬಾನ್ ಅಥವಾ ತೆಹ್ರೀಕ್-ಎ-ತಾಲಿಬಾನ್ (ಟಿಟಿಪಿ) ವಕ್ತಾರರಾದ ಮೊಹಮ್ಮದ್ ಖುರಸನಿ ಅವರು ಹೇಳಿಕೆ ನೀಡಿದ್ದು, ದಾಳಿಯಲ್ಲಿ 27 ಮಂದಿ ಮಹಿಳೆಯರು ಮತ್ತು ಮಕ್ಕಳು ಒಳಗೊಂಡಂತೆ 50 ಜನರು ಸತ್ತಿದ್ದಾರೆ ಎಂದು ತಿಳಿಸಿದರು.
ದಾಳಿ ನಡೆದ ಪ್ರದೇಶದ ನಿವಾಸಿಗಳ ಪ್ರಕಾರ, ಸ್ಥಳದಲ್ಲಿಯೇ ಕನಿಷ್ಠ 13 ಮಂದಿ ಸತ್ತಿದ್ದು, ಹಲವರು ಗಾಯಗೊಂಡರು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆ ಆಗಬಹುದು.
ಪಾಕಿಸ್ತಾನವು ಕ್ಷಿಪಣಿ ದಾಳಿ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಪಾಕಿಸ್ತಾನ ಸೇನೆಯು 'ಖಚಿತ ಮಾಹಿತಿ ಆಧರಿಸಿ ದಕ್ಷಿಣ ವಜೀರಿಸ್ತಾನ್‌ನಲ್ಲಿ ಕಾರ್ಯಾಚರಣೆ ನಡೆಸಿದ್ದು, 13 ಮಂದಿ ಒಳನುಸುಳುಕೋರರನ್ನು ಹತ್ಯೆ ಮಾಡಲಾಗಿದೆ' ಎಂದು ಬುಧವಾರ ತಿಳಿಸಿದೆ.
ಗಡಿಯಲ್ಲಿ ಸಕ್ರಿಯವಾಗಿರುವ ಟಿಟಿಪಿ ಪ್ರತ್ಯೇಕ ಸಂಘಟನೆಯು ಅಫ್ಗನ್ ತಾಲಿಬಾನ್ ಜೊತೆ ನಿಕಟ ಸಂಪರ್ಕದಲ್ಲಿದೆ. ಆಗಸ್ಟ್ 2021ರಲ್ಲಿ ಅಫ್ಗನ್‌ನಲ್ಲಿ ಅಧಿಕಾರ ಕೈವಶ ಮಾಡಿಕೊಂಡಿತ್ತು.