ಹಿಸಾರ್: ಹರಿಯಾಣದ ಹಿಸಾರ್ ಜಿಲ್ಲೆಯ ಬುಡಾನಾ ಗ್ರಾಮದಲ್ಲಿ ಮಲಗಿದ್ದ ವೇಳೆ ಇಟ್ಟಿಗೆ ಗೂಡಿನ ಗೋಡೆ ಕುಸಿದು ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾರ್ನಾಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಬುಡಾನಾ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಅವಘಡ ಸಂಭವಿಸಿದೆ.
ನಿಶಾ (3 ತಿಂಗಳು), ಸೂರಜ್ (9), ನಂದಿನಿ (5) ಮತ್ತು ವಿವೇಕ್ (9) ಮೃತಪಟ್ಟಿದ್ದಾರೆ.
ಮಕ್ಕಳು ಮತ್ತು ಕೆಲವು ಕಾರ್ಮಿಕರು ಇಟ್ಟಿಗೆ ಭಟ್ಟಿಯ ಬಳಿ ಮಲಗಿದ್ದಾಗ ಗೋಡೆ ಅವರ ಮೇಲೆ ಕುಸಿದಿದೆ. ಪರಿಣಾಮ ಸೂರಜ್, ನಂದಿನಿ ಮತ್ತು ವಿವೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಶಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್ ಮೀನಾ ತಿಳಿಸಿದ್ದಾರೆ.
ಐದು ವರ್ಷದ ಗೌರಿ ಎಂಬ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ಆಕೆ ಹಿಸಾರ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಎಲ್ಲಾ ಐವರು ಮಕ್ಕಳು ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಬಧವ್ ಗ್ರಾಮದವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಕುರಿತು ಸಂತ್ರಸ್ತರ ಕುಟುಂಬಗಳು ಯಾವುದೇ ಲಿಖಿತ ದೂರು ನೀಡಿಲ್ಲ. ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಮೀನಾ ತಿಳಿಸಿದ್ದಾರೆ.