ನವದೆಹಲಿ: 'ಉದ್ಯಮಗಳಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದು ಅರ್ಥಹೀನವಾಗುತ್ತದೆ. ಅದರ ಬದಲಾಗಿ ಕಡಿಮೆ ಸಮಯದಲ್ಲಿ ಹೆಚ್ಚು ದಕ್ಷತೆದಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು' ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ.
'ಪ್ರತಿಯೊಬ್ಬರ ದೈನಂದಿನ ಜೀವನವು ಒಂದು ಹೋರಾಟವಾಗಿದ್ದು, ಅಸಮರ್ಥ ಮತ್ತು ಕೆಳದರ್ಜೆಯ ಮೂಲಸೌಕರ್ಯ ಸೌಕರ್ಯಗಳೊಂದಿಗೆ ಹೋರಾಟ ನಡೆಸಬೇಕಾಗಿದೆ.
ಉತ್ತಮ ಸಾಮಾಜಿಕ ವ್ಯವಸ್ಥೆ ಮತ್ತು ಸಾಮರಸ್ಯಕ್ಕಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಹಾಗಾಗಿ ನಾವು ಸೋಮವಾರ ಮಧ್ಯಾಹ್ನ 12ರಿಂದ ಶುಕ್ರವಾರ ಮಧ್ಯಾಹ್ನ 2ರವರೆಗೆ (ವಾರಕ್ಕೆ 4 ದಿನಗಳ ಕಾಲ) ಕೆಲಸ ಮಾಡುವುದು ಸೂಕ್ತ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉದ್ಯಮಗಳಲ್ಲಿ ವಾರಕ್ಕೆ 70 ಗಂಟೆಯ (ಐದು ದಿನದ ದುಡಿಮೆ ದಿನಗಳಂದು) ಕೆಲಸ ಮಾಡುವುದು ಅಗತ್ಯ ಎಂಬ ವಿಷಯ ಕುರಿತಂತೆ ಇನ್ಫೊಸಿಸ್‌ನ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರ ಅಭಿಪ್ರಾಯ ಕುರಿತು ಈಚೆಗೆ ವ್ಯಾಪಕ ಚರ್ಚೆ ನಡೆದಿತ್ತು.
ಮುಂಬೈನಲ್ಲಿ ನಡೆದ ಸಿಎನ್‌ಬಿಸಿ ಜಾಗತಿಕ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ್ದ ನಾರಾಯಣಮೂರ್ತಿ, 'ಭಾರತದ ಅಭಿವೃದ್ಧಿಗೆ ತ್ಯಾಗ ಬೇಕಿದೆ; ವಿಶ್ರಾಂತಿ ಅಲ್ಲ. ದಯವಿಟ್ಟು ಕ್ಷಮಿಸಿ. ನನ್ನ ಉಸಿರು ಇರುವವರೆಗೂ ಈ ನನ್ನ ನಿಲುವನ್ನು ಬದಲಾಯಿಸಿಕೊಳ್ಳುವುದಿಲ್ಲ' ಎಂದು ಹೇಳಿದ್ದರು.
'ಅದು 1986ರ ಸಮಯ. ಆಗ ಭಾರತದಲ್ಲಿ ಐ.ಟಿ ಹಾಗೂ ಇತರೆ ವಲಯಗಳಲ್ಲಿ ವಾರದಲ್ಲಿ ಆರು ದಿನಗಳ ಬದಲು ಐದು ದಿನ ಕೆಲಸ ಮಾಡುವ ನೀತಿಯನ್ನು ಜಾರಿಗೊಳಿಸಲಾಯಿತು. ಇನ್ಫೊಸಿಸ್‌ನಲ್ಲಿ ಈ ನಿಯಮ ಜಾರಿಗೊಂಡ ವೇಳೆ ನನಗೆ ನಿರಾಶೆಯಾಯಿತು ಎಂದ ಅವರು, ನಾನು ಕಂಪನಿಯಿಂದ ನಿವೃತ್ತಿಯಾಗುವವರೆಗೂ ದಿನಕ್ಕೆ 14 ಗಂಟೆ ಕೆಲಸ ಮಾಡಿದ್ದೇನೆ' ಎಂದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ವಾರದಲ್ಲಿ 100 ಗಂಟೆ ಕೆಲಸ ಮಾಡುತ್ತಾರೆ ಎಂಬ ಬಗ್ಗೆ ಗಮನ ಸೆಳೆದ ಅವರು, 'ಮೋದಿ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ನಾವು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮ್ಮ ಮೆಚ್ಚುಗೆಯನ್ನು ಸೂಚಿಸಬೇಕಿದೆ' ಎಂದು ತಿಳಿಸಿದ್ದರು.
'ಕಠಿಣ ಪಶ್ರಮಕ್ಕೆ ಪರ್ಯಾಯ ಎಂಬುದು ಇಲ್ಲ. ನೀವು ಹೆಚ್ಚು ಬುದ್ಧಿವಂತ ವ್ಯಕ್ತಿಯಾಗಿದ್ದರೂ ಶ್ರಮಪಟ್ಟು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ, ದೇಶದಲ್ಲಿ ನಾವು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ. ಹಾಗಾಗಿ, ಕೆಲಸದ ಅವಧಿ ಕುರಿತ ನನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದಿಲ್ಲ' ಎಂದೂ ಹೇಳಿದ್ದರು.
ಇದೀಗ ಕಾರ್ತಿ ಚಿದಂಬರಂ ಅವರು ನಾರಾಯಣಮೂರ್ತಿಯವರ ಕೆಲಸದ ಕಲ್ಪನೆಗೆ ಪ್ರತಿಯಾಗಿ ಹೊಸ ಪರಿಕಲ್ಪನೆ ಸೂಚಿಸಿದ್ದು, ಕೆಲಸದ ಅವಧಿ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದ್ದಾರೆ.