ಚುರಾಚಾಂದ್‌ಪುರ: ಜಿರೀಬಾಮ್ ಜಿಲ್ಲೆಯ ಬೊರುಬೆಕ್ರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ಹತರಾದ ಕುಕಿ-ಜೊ ಬುಡಕಟ್ಟು ಸಮುದಾಯದ 10 ಮಂದಿ ಸೇರಿದಂತೆ ಒಟ್ಟು 12 ಜನರ ಅಂತ್ಯಕ್ರಿಯೆ ಡಿಸೆಂಬರ್ 5 ರಂದು ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಸಮುದಾಯದ ಪ್ರಮುಖ ಸಂಘಟನೆಯೊಂದು ತಿಳಿಸಿದೆ.
ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಶನಿವಾರ ತುರ್ತು ಸಭೆ ನಡೆಸಿದ್ದು, ಈ ಕುರಿತು ಘೋಷಣೆ ಮಾಡಿದೆ.
ಕುಕಿ-ಜೊ ಬುಡಕಟ್ಟು ಸಮುದಾಯ ಯುವಕರ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುವವರೆಗೆ ಅವರ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಐಟಿಎಲ್‌ಎಫ್ ಈ ಹಿಂದೆ ಹೇಳಿತ್ತು.
ಮರಣೋತ್ತರ ಪರೀಕ್ಷೆಯ ವರದಿಗಳನ್ನು ವಿಧಿವಿಜ್ಞಾನ ಮತ್ತು ಕಾನೂನು ತಜ್ಞರು ಪರಿಶೀಲಿಸಿದ್ದಾರೆ. ತಜ್ಞರ ಪ್ರಕಾರ , ಮರಣೋತ್ತರ ಪರೀಕ್ಷೆಯ ವರದಿಗಳು ತೃಪ್ತಿಕರವಾಗಿವೆ ಎಂದು ಐಟಿಎಲ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ, ಮೃತ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟ ಮುಂದುವರಿಸುವುದಾಗಿ ಅದು ಹೇಳಿದೆ.
ಹುತಾತ್ಮರಾದ 12 ಜನರನ್ನು ಡಿಸೆಂಬರ್ 5ರಂದು ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು. ಟುಯಿಬುಂಗ್‌ನ ಮೈದಾನದಲ್ಲಿ ಸಂತಾಪ ಸೂಚನೆ ಕಾರ್ಯಕ್ರಮ ನಡೆಯಲಿದೆ. ಆ ದಿನ ಬೃಹತ್ ಮೌನ ಮೆರವಣಿಗೆಯನ್ನು ಆಯೋಜಿಸಲಾಗುವುದು ಎಂದು ಐಟಿಎಲ್‌ಎಫ್ ಹೇಳಿದೆ.
ಮೃತಪಟ್ಟ 12 ಜನರಲ್ಲಿ 10 ಮಂದಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ. ಉಳಿದ ಇಬ್ಬರು ಯುವಕರು ತಮ್ಮ ಕುಟುಂಬದವರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಮೈತೇಯಿ ಉಗ್ರಗಾಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಐಟಿಎಲ್‌ಎಫ್ ಕಾರ್ಯದರ್ಶಿ ಮುವಾನ್ ಟಾಂಬಿಂಗ್ ಹೇಳಿದ್ದಾರೆ.
ಹತರಾದವರು ಶಂಕಿತ ಉಗ್ರರು ಎಂದು ಮಣಿಪುರ ಸರ್ಕಾರ ಪ್ರತಿಪಾದಿಸಿದೆ. ಆದರೆ ಐಟಿಎಲ್‌ಎಫ್ ಅವರನ್ನು ಗ್ರಾಮ ಸ್ವಯಂರಕ್ಷಕರು ಎಂದು ಹೇಳಿಕೊಂಡಿದೆ.
ನವೆಂಬರ್ 11ರಂದು ಜಿರೀಬಾಮ್ ಜಿಲ್ಲೆಯ ಬೊರುಬೆಕ್ರಾ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿತ್ತು.