ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಗಸ್ತು ಸಂದರ್ಭದಲ್ಲಿ ಮೃತಪಟ್ಟ ಯೋಧರೊಬ್ಬರ ಪತ್ನಿಗೆ ಪಿಂಚಣಿ (ಎಲ್‌ಎಫ್‌ಪಿ) ನೀಡುವಂತೆ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ನೀಡಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ₹50 ಸಾವಿರ ದಂಡ ವಿಧಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು, ವಿಧವೆಯನ್ನು ನ್ಯಾಯಾಲಯಕ್ಕೆ ಎಳೆದು ತರಬಾರದಿತ್ತು ಎಂದು ಹೇಳಿದೆ.
'ನಿರ್ಧಾರ ಕೈಗೊಳ್ಳುವ ಅಧಿಕಾರಿಗಳು ಕರ್ತವ್ಯದ ವೇಳೆ ಮೃತಪಟ್ಟ ಯೋಧನ ಪತ್ನಿಯ ವಿಚಾರದಲ್ಲಿ ಸಹಾನುಭೂತಿ ಹೊಂದಿರಬೇಕಿತ್ತು. ಹೀಗಾಗಿ ನಾವು ₹50 ಸಾವಿರ ದಂಡ ವಿಧಿಸುತ್ತಿದ್ದೇವೆ. ಈ ಮೊತ್ತವನ್ನು ಯೋಧನ ಪತ್ನಿಗೆ ನೀಡಬೇಕು' ಎಂದು ಪೀಠವು ಹೇಳಿದೆ. ಮೊತ್ತವನ್ನು ಇನ್ನು ಎರಡು ತಿಂಗಳಲ್ಲಿ ಪಾವತಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿದೆ.
ಯೋಧ ನಾಯ್ಕ್ ಇಂದರ್‌ಜೀತ್ ಸಿಂಗ್ ಅವರು 2013ರ ಜನವರಿಯಲ್ಲಿ ಗಸ್ತು ನಡೆಸುತ್ತಿದ್ದಾಗ ತೀರಾ ವಿಷಮ ಹವಾಮಾನ ಪರಿಸ್ಥಿತಿಯಲ್ಲಿ ಹೃದಯ ಸ್ತಂಭನದಿಂದಾಗಿ ಮೃತಪಟ್ಟಿದ್ದರು.