ನವದೆಹಲಿ: ನೇರ ನೇಮಕಾತಿ (ಲ್ಯಾಟರಲ್ ಎಂಟ್ರಿ) ಮೂಲಕ ನೇಮಕವಾಗಿರುವ 51 ತಜ್ಞರು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಬುಧವಾರ ಮಾಹಿತಿ ನೀಡಿದೆ.
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ಮತ್ತು ಪರಿಣತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 2018ರಿಂದಲೂ ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ನಡೆಸಿದೆ.
ಇಲ್ಲಿಯವರೆಗೆ ವಿವಿಧ ಇಲಾಖೆಗಳಲ್ಲಿನ ಜಂಟಿ ಕಾರ್ಯದರ್ಶಿ/ ನಿರ್ದೇಶಕ/ ಉಪ ಕಾರ್ಯದರ್ಶಿ ಹಂತಗಳಲ್ಲಿ 63 ನೇಮಕಾತಿಗಳು ಈ ಮಾದರಿಯಲ್ಲಿ ಆಗಿವೆ. ಅವರನ್ನು ಗುತ್ತಿಗೆ ಅಥವಾ ನಿಯೋಜನೆ ಆಧಾರದ ಮೇರೆಗೆ ನೇಮಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರ ನೀಡಿದ್ದಾರೆ.
ಈ ರೀತಿ ನೇಮಕಗೊಂಡವರ ಪೈಕಿ ಸದ್ಯ 51 ಅಧಿಕಾರಿಗಳು ವಿವಿಧ ಸಚಿವಾಲಯ/ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಲ್ಯಾಟರಲ್ ಎಂಟ್ರಿ ವಿಧಾನದ ನೇಮಕಾತಿಯ ಪರಿಣಾಮದಿಂದ ಇಲಾಖೆಗಳಲ್ಲಿ ಕಾರ್ಯಕ್ಷಮತೆ ಏನಾದರೂ ಹೆಚ್ಚಾಗಿದೆಯಾ? ಈ ಕುರಿತು ಅಧ್ಯಯನವೇನಾದರೂ ನಡೆದಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, 'ಕಾಲ ಕಾಲಕ್ಕೆ ಆಂತರಿಕ ಮೌಲ್ಯಮಾಪನಗಳು ನಡೆಯುತ್ತಿರುತ್ತವೆ, ಆದರೆ ಆ ಸಂಬಂಧ ಯಾವುದೇ ಅಧ್ಯಯನ ನಡೆದಿಲ್ಲ' ಎಂದು ಹೇಳಿದ್ದಾರೆ.