ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕೆಲ ದಿನಗಳಿಂದ ನಿಂತಿದ್ದ ಎಸ್‌ಯುವಿಯಲ್ಲಿ ₹40 ಕೋಟಿ ಮೌಲ್ಯದ 52 ಕೆ.ಜಿ ಚಿನ್ನದ ಗಟ್ಟಿ ಮತ್ತು ₹11 ಕೋಟಿ ನಗದು ಪತ್ತೆಯಾಗಿದ್ದು, ಅದನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿದೆ.
ಆದಾಯ ತೆರಿಗೆ ಇಲಾಖೆಯು ಕೆಲ ದಿನಗಳಿಂದ ನಗರದಲ್ಲಿ ವ್ಯಾಪಕ ಶೋಧ ನಡೆಸುತ್ತಿದ್ದು, ಅದರ ಬೆನ್ನಲ್ಲೇ ಇದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
'ಇಲ್ಲಿನ ಕುಶಾಲಪುರ ರಸ್ತೆಯಲ್ಲಿ ವಾಹನವೊಂದು ನಿಂತಿದ್ದು, ಅದರೊಳಗೆ ಕೆಲ ಚೀಲಗಳಿವೆ ಎಂಬ ಮಾಹಿತಿ ಗುರುವಾರ ರಾತ್ರಿ ಬಂದಿತು. ಅದನ್ನು ಆಧರಿಸಿ ಪರಿಶೀಲಿಸಿದಾಗ ಚಿನ್ನ ಮತ್ತು ನಗದು ಪತ್ತೆಯಾಗಿದೆ' ಎಂದು ಅವರು ವಿವರಿಸಿದರು.
ಎಸ್‌ಯುವಿ ಮಧ್ಯಪ್ರದೇಶ ನೋಂದಣಿ ಸಂಖ್ಯೆ ಹೊಂದಿದ್ದು, ನಾಲ್ಕು ವರ್ಷಗಳಿಂದ ಭೋಪಾಲ್‌ನಲ್ಲಿ ವಾಸಿಸುತ್ತಿರುವ ಗ್ವಾಲಿಯರ್ ಮೂಲದ ಚಂದನ್ ಸಿಂಗ್ ಗೌರ್ ಎಂಬುವರಿಗೆ ಸೇರಿದ್ದಾಗಿದೆ ಎಂದು ಅಧಿಕಾರಿಗಳು ಹೇಳಿದರು.
'ಚಿನ್ನದ ಗಟ್ಟಿ ಮತ್ತು ನಗದು ಯಾರಿಗೆ ಸೇರಿದ್ದು ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ' ಎಂದು ಪೊಲೀಸರು ತಿಳಿಸಿದರು.