ಶ್ರೀನಗರ: ಕಾಶ್ಮೀರದಲ್ಲಿ ಶೀತಗಾಳಿ ತೀವ್ರಗೊಂಡಿದ್ದು, ತಾಪಮಾನ ಕುಸಿದಿದೆ. ಇಲ್ಲಿನ ದಾಲ್ ಸರೋವರ ಸೇರಿದಂತೆ ಹಲವಾರು ಜಲಮೂಲಗಳು ಹೆಪ್ಪುಗಟ್ಟುತ್ತಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಶ್ರೀನಗರದಲ್ಲಿ ತಾಪಮಾನ ಮೈನಸ್ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕಳೆದ ರಾತ್ರಿ ಮೈನಸ್ 3.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಳಿಯಿಂದಾಗಿ ನಗರದ ಹಲವು ಪ್ರದೇಶಗಳು ಮತ್ತು ಕಣಿವೆಗಳಲ್ಲಿ ನೀರು ಸರಬರಾಜು ಮಾರ್ಗಗಳು ಸ್ಥಗಿತಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನಪ್ರಿಯ ಪ್ರವಾಸಿ ತಾಣ ಗುಲ್ಮಾರ್ಗ್‌ನಲ್ಲಿ ಮೈನಸ್ 4 ಡಿಗ್ರಿ ಸೆಲ್ಸಿಯಸ್, ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್‌ಗಳಲ್ಲಿ ಒಂದಾದ ಪಹಲ್‌ಗಾಮ್‌ನಲ್ಲಿ ಮೈನಸ್ 6.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಪಂಪೋರ್ ಪಟ್ಟಣದ ಹೊರವಲಯದಲ್ಲಿರುವ ಕೊನಿಬಾಲ್ ಕಣಿವೆಯಲ್ಲಿ ಅತ್ಯಂತ ಕಡಿಮೆ ತಾಪಮಾನ ( 8.5 ಡಿಗ್ರಿ) ದಾಖಲಾಗಿದೆ.
ಕಾಶ್ಮೀರದ ಹೆಬ್ಬಾಗಿಲು ಕಾಜಿಗುಂಡ್‌ನಲ್ಲಿ ಮೈನಸ್ 6 ಡಿಗ್ರಿ ಸೆಲ್ಸಿಯಸ್, ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಮೈನಸ್ 5.6 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕಾಶ್ಮೀರದ ಕೋಕರ್‌ನಾಗ್‌ನಲ್ಲಿ ಮೈನಸ್ 5.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಡಿಸೆಂಬರ್ 26ರವರೆಗೂ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಡಿಸೆಂಬರ್ 21-22ರ ರಾತ್ರಿ ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಲಘು ಹಿಮಪಾತದ ಸಾಧ್ಯತೆಯಿದೆ ಎಂದು ಹೇಳಿದೆ.