ಮುಂಬೈ: ಮಹಾರಾಷ್ಟ್ರದಲ್ಲಿ 'ಮಹಾಯುತಿ' ಮೈತ್ರಿಕೂಟದ ಹೊಸ ಸರ್ಕಾರ ಡಿಸೆಂಬರ್ 5ರಂದು ರಚನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡಣವೀಸ್ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಜತೆಗೆ ಅಜಿತ್ ಪವಾರ ನೇತೃತ್ವದ ಎನ್‌ಸಿಪಿ ಕೂಡ ಪಢಣವೀಸ್‌ಗೆ ಬೆಂಬಲ ಸೂಚಿಸಿದೆ.
ಅಧಿಕಾರ ಹಂಚಿಕೆ ಸೂತ್ರ ಮತ್ತು ಖಾತೆ ಹಂಚಿಕೆ ಬಗ್ಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಡುವೆ ವಾರಾಂತ್ಯದಲ್ಲಿ ಮಾತುಕತೆ ಮುಂದು ವರಿದಿರುವಾಗಲೇ ಬಿಜೆಪಿಯಿಂದ ಸರ್ಕಾರ ರಚನೆಯ ದಿನಾಂಕದ ಬಗ್ಗೆ ಹೇಳಿಕೆ ಹೊರಬಿದ್ದಿದೆ.
'ಕಾಯುವಿಕೆ ಕೊನೆಗೊಂಡಿದೆ. ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಗುರುವಾರ ಸಂಜೆ 5 ಗಂಟೆಗೆ ಐತಿಹಾಸಿಕ ಆಜಾದ್ ಮೈದಾನದಲ್ಲಿ ನಡೆಯಲಿದೆ. ಪ್ರಧಾನಿ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ತಿಳಿಸಿದ್ದಾರೆ.
ಇಂದು ಸಭೆ ಸಾಧ್ಯತೆ: ಮಹಾಯುತಿ ನಾಯಕರ ಸಭೆ ಭಾನುವಾರ ನಡೆಯುವ ಸಾಧ್ಯತೆಯಿದೆ ಎಂದು ಹಿಂದಿನ ವಿಧಾನಸಭೆಯಲ್ಲಿ ಸ್ಪೀಕರ್ ಆಗಿದ್ದ ಕೊಲಾಬಾ ಕ್ಷೇತ್ರದ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಹೇಳಿದ್ದಾರೆ.
ಡಿ.2-3ರಂದು ಬಿಜೆಪಿ ಶಾಸಕಾಂಗ ಸಭೆ: ಡಿಸೆಂಬರ್ 2 ಅಥವಾ 3 ರಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಭೆ ನಡೆಸಲಾಗುವುದು ಎಂದು ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ತಿಳಿಸಿದ್ದಾರೆ.
'ಮಹಾಯುತಿ'ಯಲ್ಲಿ ಒಡಕು?
'ಮಹಾಯುತಿ' ಮಿತ್ರಪಕ್ಷಗಳಲ್ಲಿ ಬಿರುಕುಗಳು ಮೂಡಿರುವುದನ್ನು ಶಿರ್ಸಾಟ್ ಹೇಳಿಕೆಗಳು ಸೂಚಿಸಿವೆ.
ಶಿವಸೇನಾ ಮೂಲಗಳ ಪ್ರಕಾರ, ಪಕ್ಷವು ಗೃಹ ಖಾತೆಗೆ ಬೇಡಿಕೆ ಇಟ್ಟಿದೆ. ಸರ್ಕಾರ ರಚನೆಗೆ ಸಂಬಂಧಿಸಿದ ಮಾತುಕತೆಗಳಿಂದ ಅಸಮಾಧಾನಗೊಂಡೇ ಏಕನಾಥ ಶಿಂದೆ ಅವರು ತಮ್ಮ ಹುಟ್ಟೂರಾದ ಸಾತಾರಾ ಜಿಲ್ಲೆಯ ಡೇರ್ ಗ್ರಾಮಕ್ಕೆ ತೆರಳಿದ್ದಾರೆ.
'ಬಿಜೆಪಿಯು ಸಂಖ್ಯಾಬಲದಿಂದ ಮುಖ್ಯಮಂತ್ರಿ ಸ್ಥಾನ ಕೇಳುತ್ತಿದೆ. ಇದು ಶಿವಸೇನಾಗೆ ಅಸಮಾಧಾನ ತಂದಿದೆ. ಶಿಂದೆ ಅವರನ್ನು ಮಹಾಯುತಿ ಸರ್ಕಾರದ ಮುಖವನ್ನಾಗಿಸಿ ಕೊಂಡು ಬಿಜೆಪಿ ಖಂಡಿತವಾಗಿಯೂ ಲಾಭ ಗಳಿಸಿದೆ' ಎಂದು ಅವರು ಹೇಳಿದ್ದಾರೆ.
ಶಿವಸೇನಾ, ಎನ್‌ಸಿಪಿಗೆ ಡಿಸಿಎಂ ಸ್ಥಾನ
ಹೊಸ ಸರ್ಕಾರ ಒಟ್ಟು 43 ಸಚಿವರನ್ನು ಹೊಂದಬಹುದಾಗಿದೆ. ಬಿಜೆಪಿ 21 ಸಚಿವ ಸ್ಥಾನ, ಶಿವಸೇನಾ ಮತ್ತು ಎನ್‌ಸಿಪಿ ಕ್ರಮವಾಗಿ 12 ಮತ್ತು 10 ಸಚಿವ ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ.
ಬಿಜೆಪಿ ಸಿ.ಎಂ ಸ್ಥಾನ ಪಡೆದರೆ, ಶಿವಸೇನಾ ಮತ್ತು ಎನ್‌ಸಿಪಿಯಿಂದ ತಲಾ ಒಬ್ಬರು ಉಪಮುಖ್ಯಮಂತ್ರಿ ಇರಲಿದ್ದಾರೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಕಂದಾಯ, ಗೃಹ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಜಲ ಸಂಪನ್ಮೂಲಗಳು, ಇಂಧನದಂತಹ ನಿರ್ಣಾಯಕ ಖಾತೆಗಳನ್ನು ಪಡೆಯಲು ಮೂರೂ ಪಕ್ಷಗಳು ಕಸರತ್ತು ನಡೆಸುತ್ತಿವೆ.
ಸಂಜಯ್ ಶಿರ್ಸಾಟ್, ಶಿವಸೇನಾ ಶಾಸಕಶಿಂದೆ ಅವರ 'ಕಾಮನ್ ಮ್ಯಾನ್' ವ್ಯಕ್ತಿತ್ವವು ಜನರಿಗೆ ಹೆಚ್ಚು ಇಷ್ಟವಾಗಿದೆ. ಕೆಲವೊಬ್ಬರು ಅವರನ್ನು 'ಗದ್ದಾರ್' ಎಂದರೂ ಚುನಾವಣೆಯ ನಂತರ ಅವರ ವರ್ಚಸ್ಸು ಹೆಚ್ಚಿದೆ.