ಬಿಜಾಪುರ: ಛತ್ತೀಸ್‌ಗಢದಲ್ಲಿ ಬಿಜೆಪಿ ಕಾರ್ಯಕರ್ತನನ್ನು ನಕ್ಸಲರು ಹತ್ಯೆ ಮಾಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಏಳು ದಿನಗಳಲ್ಲಿ ಐವರು ನಾಗರಿಕರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ.
35 ವರ್ಷದ ಮೃತ ವ್ಯಕ್ತಿಯನ್ನು ಕುಡಿಯಾಮ್ ಎಂದು ಗುರುತಿಸಲಾಗಿದೆ.
ಈತ ಬಿಜಾಪುರ ಜಿಲ್ಲೆಯ ಸೋಮನ್‌ಪಲ್ಲಿ ಗ್ರಾಮದ ನಿವಾಸಿ. ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿದ್ದು ನಕ್ಸಲರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ ಕುಡಿಯಾಮ್ ಮನೆಗೆ ನುಗ್ಗಿದ್ದ ನಕ್ಸಲರು ಆತನನ್ನು ಹೊರಗೆ ಎಳೆದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ಮಾಹಿತಿ ದೊರೆತ ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಕ್ಸಲರನ್ನು ಪತ್ತೆ ಹಚ್ಚಲು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 4ರಂದು ಇಬ್ಬರು ಮಾಜಿ ಗ್ರಾಮಪಂಚಾಯಿತಿ ಸದಸ್ಯರನ್ನು(ಇವರಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ) ನಕ್ಸಲರು ಹತ್ಯೆ ಮಾಡಿದ್ದರು. ಡಿಸೆಂಬರ್ 6ರಂದು ಅಂಗನವಾಡಿ ಸಹಾಯಕಿಯನ್ನು ಹತ್ಯೆಗೈದಿದ್ದರು.