ಭುವನೇಶ್ವರ: ಕಳೆದ ಕೆಲವು ವರ್ಷಗಳಿಂದ ಒಡಿಶಾದಲ್ಲಿ ನಕ್ಸಲ್ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗಿದೆ. ನಿಷೇಧಿತ ಸಂಘಟನೆಯ 60-70 ಸದಸ್ಯರಷ್ಟೇ ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಬಿಎಸ್‌ಎಫ್ ಐಜಿ ಸಿ.ಡಿ.ಅಗರ್ವಾಲ್, 'ಒಡಿಶಾದಲ್ಲಿ ಸಕ್ರಿಯವಾಗಿರುವ ಹೆಚ್ಚಿನ ನಕ್ಸಲರು ಆಂಧ್ರ ಪ್ರದೇಶ ಮತ್ತು ಛತ್ತೀಸಗಢದವರು. ಏಳು ಮಂದಿಯಷ್ಟೇ ಒಡಿಶಾದವರು. ನಾಯಕತ್ವದ ವಿಚಾರದಲ್ಲಿ ಅವರ ಪಾತ್ರಗಳಿಲ್ಲ' ಎಂದಿದ್ದಾರೆ.
'ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಏಳು ಜಿಲ್ಲೆಗಳಾದ ಕಲಹಂಡಿ, ಕಂಧಮಾಲ್, ಬೋಲಂಗಿರ್, ಮಲ್ಕಾನ್‌ಗಿರಿ, ನವರಂಗಪುರ್, ನೌಪದ ಮತ್ತು ರಾಯಗಢದಲ್ಲಿ ಎಡಪಂಥೀಯ ಉಗ್ರವಾದವಿದೆ' ಎಂದು ಹೇಳಿದ್ದಾರೆ.
'ನಕ್ಸಲ್ ಚಟುವಟಿಕೆಗಳನ್ನು ಗಮನಾರ್ಹವಾದ ತಗ್ಗಿಸಲಾಗಿದೆಯಾದರೂ, ವಿಶೇಷವಾಗಿ ಕಲಹಂಡಿ, ಕಂಧಮಾಲ್ ಮತ್ತು ಬೌಧ್‌ನ ದಟ್ಟ ಅರಣ್ಯಗಳಲ್ಲಿ ಇನ್ನೂ ಸವಾಲುಗಳಿವೆ. ಆ ಪ್ರದೇಶಗಳಲ್ಲಿ ಐಇಡಿ ಸ್ಫೋಟ ಬೆದರಿಕೆಗಳಿವೆ. ಅದಲ್ಲದೆ, ನಕ್ಸಲ್-ಸಂಬಂಧಿತ ಮಾದಕವಸ್ತು ಕಳ್ಳಸಾಗಣೆ, ಗಾಂಜಾ ಕೃಷಿ ಸಾಮಾಜಿಕ-ಆರ್ಥಿಕ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಉಂಟುಮಾಡಿದೆ' ಎಂದು ಅಗರವಾಲ್ ವಿವರಿಸಿದ್ದಾರೆ.
ನಕ್ಸಲ್ ಹಿಂಸಾಚಾರ ಪ್ರಕರಣಗಳು ತೀವ್ರವಾಗಿದ್ದಾಗ 2010ರಲ್ಲಿ ಬಿಎಸ್‌ಎಫ್ ಅನ್ನು ಮೊದಲ ಬಾರಿಗೆ ಒಡಿಶಾಗೆ ನಿಯೋಜಿಸಲಾಗಿತ್ತು.