ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಪ‍್ರತಿ ವರ್ಷ 60 ಲಕ್ಷ ಹೊಸ ಜಾಬ್ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ಅಲ್ಲದೆ ಕೆಲವೊಂದು ಮಾನದಂಡಗಳನ್ನು ಅನುಸರಿಸಿ ಹೆಸರು ತೆಗೆದು ಹಾಕುತ್ತಿದ್ದು, ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದೆ.
'ಗ್ರಾಮೀಣಾಭಿವೃದ್ಧಿಗೆ ನಿಗದಿಪಡಿಸುವ ಅನುದಾನದಲ್ಲಿ ಶೇ 57ರಷ್ಟು ಉದ್ಯೋಗ ಖಾತರಿಗೆ ಬಳಕೆಯಾಗುತ್ತಿದೆ. ಜಾಬ್ ಕಾರ್ಡ್‌ಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆಧಾರ್ ಜೋಡಣೆ ಜಾರಿಗೆ ತರಲಾಗಿದೆ' ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ತಿಳಿಸಿದರು.
ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಕೆ.ಸಿ.ವೇಣುಗೋಪಾಲ್, 'ಕಳೆದ ನಾಲ್ಕು ವರ್ಷಗಳಲ್ಲಿ ನರೇಗಾದಡಿ ನೋಂದಾಯಿಸಿಕೊಂಡಿದ್ದ 10.43 ಕೋಟಿ ಹೆಸರುಗಳನ್ನು ತೆಗೆದು ಹಾಕಲಾಗಿದೆ' ಎಂದು ದೂರಿದರು.
'ಶೇ 99ರಷ್ಟು ಜಾಬ್ ಕಾರ್ಡ್‌ಗಳನ್ನು ಆಧಾರ್‌ಗೆ ಜೋಡಣೆ ಮಾಡಲಾಗಿದೆ. ಪಾರದರ್ಶಕತೆ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆಯೇ ಹೊರತು, ತೊಂದರೆ ಉಂಟುಮಾಡುವ ಉದ್ದೇಶದಿಂದ ಅಲ್ಲ' ಎಂದು ಸಚಿವರು ಸ್ಪಷ್ಟಪಡಿಸಿದರು.