ನವದೆಹಲಿ: ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ವಿರುದ್ಧ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಅವರು ಗುರುವಾರ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.
ಸಾಗರಿಕಾ ಘೋಷ್ ಅವರ ನೋಟಿಸ್‌ಗೆ ಪ್ರತಿಪಕ್ಷಗಳ 60 ನಾಯಕರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ನಿನ್ನೆ ಸದನದಲ್ಲಿ ಪ್ರತಿಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ ಕಿರಣ್ ರಿಜಿಜು, ನೀವೆಲ್ಲರೂ ಈ ಸದನದಲ್ಲಿರಲು ಯೋಗ್ಯರಲ್ಲ ಎಂದು ಹೇಳಿದ್ದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲು ತಮ್ಮ ಕೈಲಾದಷ್ಟು ಪ್ರಯತ್ನಿಸುವ ಬದಲು ಪ್ರತಿಪಕ್ಷಗಳನ್ನು ಪದೇ ಪದೇ ಅವಮಾನಿಸಿದ್ದಾರೆ’’ ಎಂದು ಘೋಷ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ರಿಜಿಜು ಅವರು ವಿರೋಧ ಪಕ್ಷದ ಸದಸ್ಯರನ್ನು ಅವಮಾನಿಸಿದ್ದಾರೆ ಮತ್ತು ಸಂಸತ್ತಿನ ಒಳಗೆ ಮತ್ತು ಹೊರಗೆ ಅಸಂಸದೀಯ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಇದು ಅವರು ಹೊಂದಿರುವ ಉನ್ನತ ಹುದ್ದೆಗೆ ಗೌರವ ತರುವುದಿಲ್ಲ ಮತ್ತು ಅವರ ಸ್ಥಾನದ ಸಂಪೂರ್ಣ ದುರುಪಯೋಗವಾಗಿದೆ" ಎಂದು ರಾಜ್ಯಸಭೆಯಲ್ಲಿ TMC ಯ ಉಪನಾಯಕಿ ಹೇಳಿದ್ದಾರೆ.
ಕಿರಣ್ ರಿಜಿಜು ಅವರು ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಮತ್ತು ಅಸಂಸದೀಯ ಭಾಷೆ ಬಳಸಿದ್ದಕ್ಕಾಗಿ ನಾನು ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ನೋಟಿಸ್ ನೀಡಿದ್ದೇನೆ ಎಂದು ಘೋಷ್ ತಿಳಿಸಿದ್ದಾರೆ.
ಈ ಪ್ರಸ್ತಾವನೆಗೆ ಎಲ್ಲಾ ವಿರೋಧ ಪಕ್ಷಗಳ ಹಿರಿಯ ನಾಯಕರು ಸಹಿ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.