ನ್ಯೂಯಾರ್ಕ್: (PTI): ಅಮೆರಿಕದ ನೆಬ್ರಸ್ಕಾದ ರಾಜಧಾನಿಯಲ್ಲಿ ಮಹಾತ್ಮ ಗಾಂಧಿ ಅವರ ಪುತ್ಥಳಿ ಅನಾವರಣ ಮಾಡಲಾಗಿದೆ. ಡಿ.6 ಅನ್ನು 'ಗಾಂಧಿ ಸ್ಮರಣಾರ್ಥ ದಿನ'ವಾಗಿ ಆಚರಿಸಲು ನಿರ್ಧರಿಸಲಾಗಿದೆ.
ನೆಬ್ರಸ್ಕಾ ಗವರ್ನರ್ ಜೀಮ್ ಪಿಲೆನ್ ಅವರು ಶುಕ್ರವಾರ ರಾಜಧಾನಿ ಲಿಂಕನ್‌ನ ಗವರ್ನರ್ ಕಚೇರಿ ಆವರಣದಲ್ಲಿ ಗಾಂಧೀಜಿ ಅವರ ಪುತ್ಥಳಿ ಅನಾವರಣಗೊಳಿಸಿದರು.
ರಾಜ್ಯದಲ್ಲಿ ಡಿ.6 ಅನ್ನು ಮಹಾತ್ಮಗಾಂಧಿ ಸ್ಮರಣಾರ್ಥ ದಿನವಾಗಿ ಆಚರಿಸುವ ಕುರಿತು ಅಧಿಕೃತ ಹೇಳಿಕೆ ನೀಡಲಾಗಿದೆ ಎಂದು ಸಿಯಾಟಲ್‌ನ ಭಾರತೀಯ ರಾಯಭಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
'ಗಾಂಧೀಜಿ ಅವರು ಶಾಂತಿ, ಅಹಿಂಸೆಯ ಜಾಗತಿಕ ಸಂಕೇತವಾಗಿದ್ದಾರೆ. ವಿಶ್ವದಾದ್ಯಂತ ಜನರು ಈ ತತ್ವಗಳನ್ನು ಪಾಲಿಸಲು ಪ್ರೇರಣೆಯಾಗಿದ್ದಾರೆ' ಎಂದು ಅಧಿಕೃತ ಹೇಳಿಕೆ ಉಲ್ಲೇಖಿಸಿದೆ.