ಹೊನೊಲುಲು : ವಿಶ್ವದ ಅತಿ ಹಿರಿಯ ಪಕ್ಷಿ ಎಂದು ಗುರುತಿಸಲಾದ 74 ವರ್ಷ ವಯಸ್ಸಿನ 'ವಿಸ್ಡಂ' ಎಂಬ ಹೆಸರಿನ 'ಕಡಲು ಕೋಳಿ' (ಲೇಸನ್ ಅಲ್ಬಾಟ್ರಾಸ್) ಮೊಟ್ಟೆ ಇಟ್ಟಿದೆ. '4 ವರ್ಷಗಳ ಬಳಿಕ ಇದು ಮೊಟ್ಟೆ ಇಟ್ಟಿದೆ' ಎಂದು ಅಮೆರಿಕದ ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ದನೆಯ ರೆಕ್ಕೆ ಹೊಂದಿರುವ ಈ ಪಕ್ಷಿಯು ಹವಾಯಿ ದ್ವೀಪ ಪ್ರದೇಶದಲ್ಲಿರುವ 'ಮಿಡ್‌ವೇ ಅಟಾಲ್ ರಾಷ್ಟ್ರೀಯ ವನ್ಯಜೀವಿ' ತಾಣದಲ್ಲಿದೆ. ಅಮೆರಿಕದ ಮೀನು ಮತ್ತು ವನ್ಯಜೀವಿ ಸೇವಾ ಸಂಸ್ಥೆಯು ತನ್ನ ಫೇಸ್‌ಬುಕ್ ಖಾತೆಯಲ್ಲಿ ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿದೆ.
'ಈ ಮೊಟ್ಟೆಯೊಡೆದು ಪಕ್ಷಿ ಹೊರಬರಲಿದೆ ಎಂದು ನಾನು ಆಶಿಸುತ್ತೇನೆ' ಎಂದು ವನ್ಯಜೀವಿ ತಾಣದ ಮೇಲ್ವಿಚಾರಕ ಜೊನಾಥನ್ ಪ್ಲಿಸ್ನೆರ್ ಅವರು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
'ವಿಸ್ಡಂ' ಇದುವರೆಗೂ 60 ಮೊಟ್ಟೆ ಇಟ್ಟಿದೆ. ಸಾಮಾನ್ಯವಾಗಿ ಈ ಪಕ್ಷಿಗಳು ವರ್ಷಕ್ಕೆ ಒಂದು ಮೊಟ್ಟೆ ಇಡುತ್ತವೆ. ಸುಮಾರು 7 ತಿಂಗಳು ಕಾಲ ಕಾವು ನೀಡುತ್ತವೆ. ಕಡಲುಕೋಳಿಗಳು ಬಹುಪಾಲು ಸಮಯ ಸಮುದ್ರದ ಮೇಲೇ ಹಾರಲಿದ್ದು, ಮೀನಿನ ಮೊಟ್ಟೆಗಳನ್ನು ಸೇವಿಸುತ್ತವೆ.
'ಈ ಪಕ್ಷಿಯ ಗರಿಷ್ಠ ಜೀವಿತಾವಧಿ 68 ವರ್ಷ' ಎಂದು ಅಮೆರಿಕದ ನ್ಯಾಷನಲ್ ಸಾಗರ ಮತ್ತು ವಾತಾವರಣ ಆಡಳಿತ ಸಂಸ್ಥೆ (ಎ.ಪಿ) ಮಾಹಿತಿ ನೀಡಿದೆ.