ನವದೆಹಲಿ: ಪಂಜಾಬ್ ಪ್ರಾಂತ್ಯದ ಚಕ್ವಲ್ ಜಿಲ್ಲೆಯಲ್ಲಿರುವ ಶ್ರೀ ಕಟಾಸ್ ರಾಜ್ ದೇಗುಲಗಳಿಗೆ ಭೇಟಿ ನೀಡಲು 84 ಭಾರತೀಯರಿಗೆ ಪಾಕಿಸ್ತಾನ ವಿಸಾ ನೀಡಿದೆ.
ಈ ಬಗ್ಗೆ ಪಾಕಿಸ್ತಾನ ದೂತವಾಸ ಕಚೇರಿ ಮಾಹಿತಿ ನೀಡಿದೆ.ಡಿ.19-25ರ ನಡುವೆ ಭೇಟಿ ನೀಡಲು ಈ ಯಾತ್ರಾ ಸಂಘಕ್ಕೆ ವಿಸಾ ಮಂಜೂರು ಮಾಡಲಾಗಿದೆ.
ಈ ದೇಗುಲಗಳು 'ಖಿಲಾ ಕಟಾಸ್' ಎಂದೇ ಖ್ಯಾತಿ ಪಡೆದಿವೆ. ಇಲ್ಲಿ ಹಲವಾರು ದೇಗುಲಗಳಿದ್ದು, ಕಾಲುದಾರಿಯ ಮೂಲಕ ಒಂದಕ್ಕೊಂದು ಸಂಪರ್ಕವಿದೆ.
ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಉಭಯ ರಾಷ್ಟ್ರಗಳ ಮಧ್ಯೆ ಇರುವ ಒಪ್ಪಂದದ ಅನುಗುಣವಾಗಿ ಸಿಖ್, ಹಿಂದೂ ಯಾತ್ರಿಗಳಿಗೆ ಪಾಕಿಸ್ತಾನ ವಿಸಾ ನೀಡುತ್ತದೆ. ಪಾಕಿಸ್ತಾನದ ಯಾತ್ರಿಗಳೂ ಭಾರತಕ್ಕೆ ಆಗಮಿಸುತ್ತಾರೆ.
1974ರ ಒಪ್ಪಂದದ ಪ್ರಕಾರ, ಪ್ರತಿ ವರ್ಷ ಭಾರತದಿಂದ ಸಿಖ್ ಮತ್ತು ಹಿಂದೂ ಯಾತ್ರಿಕರು ವಿವಿಧ ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂದು ಪಾಕಿಸ್ತಾನದ ಹೈಕಮಿಷನ್ ತಿಳಿಸಿದೆ.
ಧಾರ್ಮಿಕ ದೇಗುಲಗಳಿಗೆ ಭೇಟಿ ನೀಡಲು, ಸರ್ವಧರ್ಮ ಸಾಮರಸ್ಯವನ್ನು ಉತ್ತೇಜಿಸಲು ಪಾಕಿಸ್ತಾನ ಸರ್ಕಾರದ ನೀತಿಗೆ ಅನುಗುಣವಾಗಿ ತೀರ್ಥಯಾತ್ರೆ ವಿಸಾಗಳನ್ನು ನೀಡುತ್ತಿದೆ ಎಂದು ಅದು ತಿಳಿಸಿದೆ.