ಟಾರ್ಟಸ್: ಅಲ್ ಕೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಜತೆ ನಿಕಟ ಸಂಪರ್ಕವಿರುವ ಸಿರಿಯಾದ ಭಯೋತ್ಪಾದನಾ ಸಂಘಟನೆಗಳ ಬಳಿ ಇರುವ ಶಸ್ತ್ರಗಳನ್ನು ನಾಶಪಡಿಸುವ ಉದ್ದೇಶದಿಂದ ಯೋಜನಾಬದ್ಧ ಬಾಂಬ್ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಮಂಗಳವಾರ ಹೇಳಿದೆ.
ಸಿರಿಯಾದ ಕರಾವಳಿ ಪ್ರದೇಶವಾದ ಟಾರ್ಟಸ್ ಮೇಲೆ ಬಾಂಬ್ ದಾಳಿ ನಡೆದಿದ್ದು, ಇದರಿಂದ ಕಿತ್ತಳೆ ಬಣ್ಣದ ಬೆಂಕಿ ಸಹಿತ ಹೊಗೆ ಆಗಸಕ್ಕೆ ಚಿಮ್ಮಿದೆ.
ಸುಮಾರು 500 ಮೀಟರ್‌ವರೆಗೂ ಬಾಂಬ್‌ನ ತೀವ್ರತೆ ಪರಿಣಾಮಕ್ಕೆ ಬಂತು ಎಂದು ಸ್ಥಳೀಯರು ಹೇಳಿದ್ದಾರೆ.
ಮ್ಯಾಗ್ನೆಟೊಮೀಟರ್ ಮೂಲಕ ಇದನ್ನು ಪರಿಶೀಲಿಸಲಾಗಿದ್ದು, ಸ್ಫೋಟ ಸಂಭವಿಸಿದ ಸ್ಥಳದಿಂದ 850 ಕಿ.ಮೀ. ದೂರದವರೆಗೂ ಇದರ ಕಂಪನದ ಅನುಭವವಾಗಿದೆ. ಇದರಿಂದಾಗಿ ಸಿರಿಯಾದಲ್ಲಿ ರಿಕ್ಟರ್ ಮಾಪನದಲ್ಲಿ 3ರಷ್ಟು ಕಿರು ಭೂಕಂಪ ಸಂಭವಿಸಿದೆ. ಭೂಮಿಯೊಳಗಿನ ಶಿಲಾಪದರ ಸೇರುವ ಸ್ಥಳದಲ್ಲೇ ಸ್ಫೋಟ ಸಂಭವಿಸಿದ್ದರಿಂದ ಈ ಕಂಪನ ಉಂಟಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
1967ರಲ್ಲಿ ತನ್ನ ವಶ ಮಾಡಿಕೊಂಡಿರುವ ಗೋಲನ್‌ನಲ್ಲಿ ತನ್ನ ಸಾಮರ್ಥ್ಯ ಹಾಗೂ ಜನಸಂಖ್ಯೆ ಹೆಚ್ಚಿಸುವುದು ಇಸ್ರೇಲ್‌ನ ಗುರಿ. ಈ ಪ್ರದೇಶದಲ್ಲಿ ತನ್ನ ಹಿಡಿತ ಸಾಧಿಸಲು ಇಸ್ರೇಲ್ ಯಾವ ಕ್ರಮ ಕೈಗೊಳ್ಳಲೂ ಹಿಂಜರಿಯದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
1967ರಲ್ಲಿ ಆರು ದಿನಗಳ ಯುದ್ಧ ನಡೆಸಿದ ಇಸ್ರೇಲ್ ಗೋಲನ್ ಪ್ರದೇಶವನ್ನು ಕೈವಶ ಮಾಡಿಕೊಂಡಿತ್ತು. ಇಸ್ರೇಲ್ ಮಂಗಳವಾರ ನಡೆಸಿದ ದಾಳಿಯನ್ನು ಸೌದಿ ಅರೇಬಿಯಾ, ಯುಎಇ, ಜೋರ್ಡಾನ್ ಸೇರಿದಂತೆ ಕೆಲ ಅರಬ್ ರಾಷ್ಟ್ರಗಳು ಖಂಡಿಸಿವೆ.