ನವದೆಹಲಿ: ಕ್ಯಾನ್ಸರ್ ನಾಲ್ಕನೇ ಹಂತದಲ್ಲಿರುವ ಪತ್ನಿ ಮನೆಮದ್ದು ಮಾಡಿ 40 ದಿನ ಕುಡಿದಿದ್ದರಿಂದ ಗುಣಮುಖರಾದರು ಎಂಬ ಸಂಗತಿಯನ್ನು ಹಂಚಿಕೊಂಡಿದ್ದ ಕ್ರಿಕೆಟರ್ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿದ್ದು ಹಾಗೂ ಅವರ ಪತ್ನಿಗೆ ಛತ್ತೀಸಗಢ ನಾಗರಿಕ ಸಮಾಜ (ಸಿಸಿಎಸ್), ₹850 ಕೋಟಿ ಪರಿಹಾರದ ನೋಟಿಸ್ ಕಳುಹಿಸಿದೆ.
ಸಿಸಿಎಸ್ ಸಂಚಾಲಕ ಡಾ. ಕುಲದೀಪ್ ಸೋಲಂಕಿ ಅವರು ಈ ಕುರಿತು ಪ್ರತಿಕ್ರಿಯಿಸಿ, 'ಸಿದ್ದು ದಂಪತಿಯು ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುವ ಮೂಲಕ ಜನರಲ್ಲಿ ಗೊಂದಲಕ್ಕೆ ಸಿಲುಕಿಸಿದ್ದಾರೆ. ಕ್ಯಾನ್ಸರ್ ಕುರಿತು ಸದ್ಯ ಇರುವ ಚಿಕಿತ್ಸೆಗಳ ಕುರಿತು ನಕಾರಾತ್ಮಕ ಮನೋಭಾವ ಸೃಷ್ಟಿಯಾಗುವಂತೆ ಮಾಡಿದ್ದಾರೆ. ಸದ್ಯ ತೆಗೆದುಕೊಳ್ಳುತ್ತಿರುವ ಚಿಕಿತ್ಸೆಯನ್ನು ಕೈಬಿಟ್ಟು, ಇವರು ಹೇಳುವ ಮನೆಮದ್ದು ಸೇವಿಸುವುದರಿಂದ ಸಾವಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚು' ಎಂದು ಹೇಳಿದ್ದಾರೆಂದು ಬ್ಯುಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.
'ತಾವು ಪ್ರಚಾರ ಮಾಡಿದ ಚಿಕಿತ್ಸೆಯನ್ನು ಸೂಕ್ತ ದಾಖಲೆ ಸಹಿತ ಒಂದು ವಾರದೊಳಗೆ ನಿರೂಪಿಸಬೇಕು' ಎಂಬ ಷರತ್ತಿನೊಂದಿಗೆ ನೋಟಿಸ್ ಜಾರಿ ಮಾಡಲಾಗಿದೆ.
'ನವಜೋತ್ ಅವರು ಹೇಳಿರುವ ಮನೆಮದ್ದು ಚಿಕಿತ್ಸೆಯ ಕುರಿತು ಅವರ ಪತ್ನಿ ಸ್ಪಷ್ಟನೆ ನೀಡಲಿ. ಒಂದೊಮ್ಮೆ ಇವರು ನೀಡಿರುವ ಮಾಹಿತಿ ತಪ್ಪಾಗಿದ್ದಲ್ಲಿ ಅದು, ಸೂಕ್ತ ಚಿಕಿತ್ಸೆಯ ನಿರೀಕ್ಷೆಯಲ್ಲಿರುವ ಬಹಳಷ್ಟು ಕ್ಯಾನ್ಸರ್ ರೋಗಿಗಳ ಪಾಲಿಗೆ ಅಪಾಯವಾಗಲಿದೆ' ಎಂದಿದ್ದಾರೆ.
ನ. 21ರಂದು ಸುದ್ದಿಗೋಷ್ಠಿ ನಡೆಸಿದ್ದ ನವಜೋತ್ ಸಿಂಗ್ ಸಿದ್ದು, 'ಕ್ಯಾನ್ಸರ್ ಎಂಬುದು ಹಾಲು, ಗೋಧಿ, ಮೈದಾ ಹಾಗೂ ಸಕ್ಕರೆ ಸೇವನೆಯಿಂದ ದೇಹದಲ್ಲಿ ಉಂಟಾಗುವ ಉರಿಯೂತದಿಂದ ಸಂಭವಿಸುತ್ತದೆ. ಕ್ಯಾನ್ಸರ್ 4ನೇ ಹಂತದಲ್ಲಿರುವ ಪತ್ನಿ, ಕೆಲವೊಂದು ಮನೆಮದ್ದು ಬಳಸಿ ತಯಾರಿಸಿದ ಪೇಯ ಸೇವಿಸಿದ್ದರಿಂದ ಗುಣಮುಖರಾಗಿದ್ದಾರೆ. ಸ್ವತಃ ನಾನೂ 25 ಕೆ.ಜಿ. ತೂಕ ಕಳೆದುಕೊಂಡಿದ್ದೇನೆ' ಎಂದಿದ್ದರು.
ಸಿದ್ದು ಅವರ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಹಳಷ್ಟು ವೈದ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.