ನವದೆಹಲಿ: 1987ರ ಹಾಶಿಂಪುರ ಹತ್ಯಾಕಾಂಡ ಪ್ರಕರಣದ 8 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಅಪರಾಧಿಗಳ ಪರವಾಗಿ ಹಾಜರಾದ ಹಿರಿಯ ವಕೀಲ ಅಮಿತ್ ಆನಂದ್ ತಿವಾರಿ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಅಭಯ್.ಎಸ್.ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
1987ರ ಮೇ 22ರ ಸಂಜೆ ಹಾಶಿಂಪುರ ಮೊಹಲ್ಲಾದ ಮೇಲೆ ದಾಳಿ ಮಾಡಿದ ಪಿಎಸಿಯ ತುಕಡಿಯೊಂದು ಗ್ರಾಮದ 45 ಮಂದಿ ಮುಸ್ಲಿಮರನ್ನು ಅಪಹರಿಸಿತ್ತು. ಇವರಲ್ಲಿ ಹೆಚ್ಚಿನವರನ್ನು ಗುಂಡು ಹಾರಿಸಿ ಕೊಂದು ಶವಗಳನ್ನು ಗಂಗಾ ಮೇಲ್ದಂಡೆ ನಾಲೆಗೆ ಎಸೆಯಲಾಗಿತ್ತು. ಪೊಲೀಸರ ಗುಂಡೇಟು ತಿಂದರೂ ಐದು ಮಂದಿ ಪ್ರಾಣ ಉಳಿಸಿಕೊಂಡಿದ್ದರು. ಸಶಸ್ತ್ರ ಪಡೆಗಳು ನಡೆಸಿದ ಈ ನರಮೇಧ ಬೆಳಕಿಗೆ ಬಂದ ಮೇಲೆ ನಡೆದ ತನಿಖೆಯಲ್ಲಿ 38 ಮಂದಿಯ ಸಾವನ್ನು ಖಚಿತಪಡಿಸಲಾಗಿತ್ತು.
ಪ್ರಕರಣ ಸಂಬಂಧ ಹತ್ಯೆಗೀಡಾದವರ ಕುಟುಂಬಗಳು ಮತ್ತು ಮಾನವ ಹಕ್ಕು ಸಂಘಟನೆಗಳು ನ್ಯಾಯಾಲಯದ ಮೊರೆ ಹೋದ ಮೇಲೆ 1996ರಲ್ಲಿ 19 ಮಂದಿ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಲಾಯಿತು. 19 ಮಂದಿಯಲ್ಲಿ ಮೂವರು ವಿಚಾರಣೆಯ ಬಾಕಿ ಇರುವಾಗಲೇ ಮೃತಪಟ್ಟಿದ್ದರು.
2015ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಗಾಜಿಯಾಬಾದ್‌ನ ವಿಚಾರಣಾ ನ್ಯಾಯಾಲಯ ಎಲ್ಲಾ 16 ಆರೋಪಿಗಳನ್ನೂ ಖುಲಾಸೆಗೊಳಿಸಿತ್ತು.
ಅಧೀನ ನ್ಯಾಯಾಲಯ ನೀಡಿದ್ದ ಈ ತೀರ್ಪನ್ನು ದೆಹಲಿ ಹೈಕೋರ್ಟ್ 2018ರ ಅಕ್ಟೋಬರ್ 31 ರಂದು ರದ್ದುಪಡಿಸಿತ್ತು. ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಇನ್ನೂ ಬಾಕಿಯಿದೆ.