ಢಾಕಾ/ಕೋಲ್ಕತ್ತ: 'ವಕೀಲ ಸೈಫುಲ್ ಇಸ್ಲಾಂ ಅವರ ಹತ್ಯೆಗೆ ಸಂಬಂಧಿಸಿ ಚಟ್ಟೋಗ್ರಾಮದ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ' ಎಂದು ಬಾಂಗ್ಲಾದೇಶದ ಪೊಲೀಸರು ಶನಿವಾರ ತಿಳಿಸಿದ್ದಾರೆ.
'ಇಸ್ಲಾಂ ಅವರ ತಂದೆ ಜಮಾಲ್ ಉದ್ದೀನ್ ಅವರು ತಮ್ಮ ಮಗನ ಹತ್ಯೆಗೆ ಸಂಬಂಧಿಸಿ ಒಟ್ಟು 46 ಮಂದಿಯ ವಿರುದ್ಧ ಶುಕ್ರವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ' ಎಂದು 'ಬಿಡಿನ್ಯೂಸ್24.ಕಾಂ' ವರದಿ ಮಾಡಿದೆ.
ಹತ್ಯೆ ಮಂಗಳವಾರ ನಡೆದಿದ್ದರೂ ಇಸ್ಲಾಂ ಅವರ ತಂದೆ ಮೂರು ದಿನಗಳ ಬಳಿಕ ದೂರು ನೀಡಿದ್ದಾರೆ. ಇದಕ್ಕೂ ಮೊದಲೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಬುಧವಾರ ಆರು ಮಂದಿಯನ್ನು ಬಂಧಿಸಿದ್ದರು.
'ದೂರಿನಲ್ಲಿ ಉಲ್ಲೇಖಿಸಿರುವ 46 ಜನರಲ್ಲಿ ಬಹುತೇಕರು ಸೀಬುಕ್ ಕಾಲೊನಿ ನಿವಾಸಿಗಳು. ಈ ಕಾಲೊನಿಯಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಸ್ವಚ್ಛತಾ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
'ನ್ಯಾಯಾಲಯ ಸಂಕೀರ್ಣದಲ್ಲಿ ಅಳವಡಿಸಲಾಗಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಾವಳಿಗಳಿಂದಾಗಿ ಆರೋಪಿಗಳ ಗುರುತು ಪತ್ತೆಯಾಗಿದೆ. ಚಂದನ್ ದಾಸ್ ಎಂಬುವರು ಈ ಪ್ರಕರಣದ ಪ್ರಮುಖ ಆರೋಪಿ. ಚಂದನ್ ಅವರು ಚೂಪಾದ ಆಯುಧದಿಂದ ವಕೀಲ ಇಸ್ಲಾಂ ಅವರ ಮೇಲೆ ದಾಳಿ ನಡೆಸುತ್ತಿದ್ದ ದೃಶ್ಯಗಳು ದೊರೆತಿವೆ. ಘರ್ಷಣೆಯಲ್ಲಿ ತೊಡಗಿದ್ದ ಹೆಚ್ಚಿನವರು ಹೆಲ್ಮೆಟ್ ಧರಿಸಿದ್ದರು ಮತ್ತು ಕೈಯಲ್ಲಿ ಚೂಪಾದ ಆಯುಧಗಳನ್ನು ಹಿಡಿದಿದ್ದರು' ಎಂದರು.
ದೂರಿನಲ್ಲಿ ಏನಿದೆ?
'ಗಡ್ಡ ಇರುವ ಕಾರಣಕ್ಕಾಗಿಯೇ ಪ್ರತಿಭಟನಕಾರರು ನನ್ನ ಮಗನ ಮೇಲೆ ಆಯುಧಗಳನ್ನು ಬಳಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇಸ್ಕಾನ್‌ನಿಂದ ಉಚ್ಛಾಟಿತಗೊಂಡಿರುವ ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಅವರ ಪರ ಘೋಷಣೆಗಳನ್ನು ಕೂಗುತ್ತಾ ನನ್ನ ಮಗನ ಮೇಲೆ ದಾಳಿ ನಡೆಸಿದ್ದಾರೆ' ಎಂದು ಇಸ್ಲಾಂ ಅವರ ತಂದೆ ತಮ್ಮ ದೂರಿನಲ್ಲಿ ಹೇಳಿದ್ದಾರೆ' ಎಂದು 'ಢಾಕಾ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.
ಬಾಂಗ್ಲಾದೇಶದಲ್ಲಿ ಚಿನ್ಮಯಿ ಕೃಷ್ಣದಾಸ್ ಅವರ ಬಂಧನವನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ತಿನ ಸದಸ್ಯರು ಶನಿವಾರ ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆಸಿದರು -ಎಎಫ್‌ಪಿ ಚಿತ್ರ
'ಬಾಂಗ್ಲಾದವರಿಗೆ ಚಿಕಿತ್ಸೆ ಇಲ್ಲ'
'ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ' ಎಂದು ತ್ರಿಪುರಾದಲ್ಲಿರುವ 'ಐಎಲ್‌ಎಸ್ ಹಾಸ್ಪಿಟಲ್' ಎಂಬ ಖಾಸಗಿ ಆಸ್ಪತ್ರೆ ಹಾಗೂ ಕೋಲ್ಕತ್ತದ ಜೆಎನ್ ರಾಯ್ ಆಸ್ಪತ್ರೆ ಘೋಷಿಸಿವೆ. 'ಬಾಂಗ್ಲಾದೇಶದ ನಾಗರಿಕರು ನಮ್ಮ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡುತ್ತಾರೆ. ಆ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ವಿರೋಧಿಸಿ ಪ್ರತಿಭಟನಾತ್ಮಕವಾಗಿ ಚಿಕಿತ್ಸೆ ನಿರಾಕರಿಸಲಾಗಿದೆ' ಎಂದು ಈ ಎರಡು ಆಸ್ಪತ್ರೆಗಳು ಹೇಳಿವೆ. ತ್ರಿಪುರಾದ ಈ ಆಸ್ಪತ್ರೆಯು ಬಾಂಗ್ಲಾದೇಶಕ್ಕೆ ಹತ್ತಿರದಲ್ಲಿರುವ ಕಾರಣ ಆ ದೇಶದ ಜನರ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ದಾಖಲಾಗುತ್ತಾರೆ. ಬಾಂಗ್ಲಾದೇಶದವರಿಗೆ ಚಿಕಿತ್ಸೆ ನೀಡಬಾರದು ಎಂದು ಒತ್ತಾಯಿಸಿ ಕೆಲವರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಮೂರು ದೇವಸ್ಥಾನಗಳ ಮೇಲೆ ದಾಳಿ
ಚಟ್ಟೋಗ್ರಾಮದ ಹರೀಶ್ ಚಂದ್ರ ಮನ್ಸೀಫ್ ರಸ್ತೆಯಲ್ಲಿರುವ ಹಿಂದೂ ದೇವಾಲಯಗಳಾದ ಶಾಂತನೇಶ್ವರಿ ಮಾತಾ ಮಂದಿರ ಶನಿ ದೇವಸ್ಥಾನ ಹಾಗೂ ಶಾಂತನೇಶ್ವರಿ ಕಾಳಿಬಾಳಿ ಮಂದಿರಗಳ ಮೇಲೆ ಶುಕ್ರವಾರ ಮಧ್ಯಾಹ್ನ ದಾಳಿ ನಡೆದಿದೆ. 'ದೇವಸ್ಥಾನಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಶನಿ ದೇವಸ್ಥಾನಕ್ಕೆ ತುಸು ಹಾನಿಯಾಗಿದೆ. ಉಳಿದ ಎರಡು ದೇವಸ್ಥಾನಗಳ ಗೇಟುಗಳಿಗೆ ಹಾನಿಯಾಗಿದೆಯಷ್ಟೆ. ಎರಡೂ ಧರ್ಮಗಳ ಜನರು ಪರಸ್ಪರ ಇಟ್ಟಿಗೆಗಳನ್ನು ತೂರಿದ್ದಾರೆ. ಇದರಿಂದ ಘರ್ಷಣೆ ಹೆಚ್ಚಾಯಿತು' ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಅಭಿಪ್ರಾಯ ರೂಪಿಸಿ: ಆರ್‌ಎಸ್‌ಎಸ್
'ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಜೊತೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು. ಮಧ್ಯಂತರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು' ಎಂದು ಆರ್‌ಎಸ್‌ಎಸ್ ಶನಿವಾರ ಒತ್ತಾಯಿಸಿದೆ. ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
'ಹಿಂದೂಗಳು ಸೇರಿದಂತೆ ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವ ತನ್ನ ಯತ್ನವನ್ನು ಭಾರತದ ಸರ್ಕಾರ ಮುಂದುವರಿಸಬೇಕು. ಜೊತೆಗೆ ಕೇಂದ್ರ ಸರ್ಕಾರವು ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಜಾಗತಿಕ ಅಭಿಪ್ರಾಯ ರೂಪಿಸಬೇಕು' ಎಂದೂ ಹೇಳಿದ್ದಾರೆ.
'ಹಿಂದೂಗಳು ಮಹಿಳೆಯರು ಹಾಗೂ ಇತರ ಅಲ್ಪಸಂಖ್ಯಾತರ ಮೇಲೆ ಇಸ್ಲಾಂ ಮೂಲಭೂತವಾದಿಗಳು ದಾಳಿ ನಡೆಸುತ್ತಿದ್ದಾರೆ. ಇದು ತೀವ್ರ ಕಳವಳಕಾರಿಯಾದುದು. ಇದನ್ನು ಆರ್‌ಎಸ್‌ಎಸ್ ಖಂಡಿಸುತ್ತದೆ' ಎಂದಿದ್ದಾರೆ.
'ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಪ್ರಜಾಪ್ರಭುತ್ವವಾದಿ ಮಾರ್ಗದಲ್ಲಿ ಹಿಂದೂಗಳು ಧ್ವನಿ ಎತ್ತುತ್ತಿದ್ದರೆ ಅವರ ಮೇಲೆ ಅನ್ಯಾಯ ಎಸಗಲಾಗುತ್ತಿದೆ. ದೌರ್ಜನ್ಯವನ್ನು ತಡೆಯುವ ಬದಲು ಬಾಂಗ್ಲಾದೇಶ ಸರ್ಕಾರ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ' ಎಂದಿದ್ದಾರೆ.