ನವದೆಹಲಿ: ರೈಲುಗಳಲ್ಲಿ ಹವಾನಿಯಂತ್ರಿತ ಎಸಿ1, ಎಸಿ2 ಅಥವಾ ಎಸಿ3 ಕೋಚುಗಳ ಬದಲಾಗಿ, ಸಾಮಾನ್ಯ ಬೋಗಿಗಳನ್ನು ಸೇರಿಸುವತ್ತ ಭಾರತೀಯ ರೈಲ್ವೆ ಗಮನ ಹರಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, 'ಬಡವರ ಕಲ್ಯಾಣಕ್ಕಾಗಿ ಮೋದಿ ಸರ್ಕಾರ ಸದಾ ಬದ್ಧವಾಗಿದ್ದು, ಡಿಸೆಂಬರ್ ಅಂತ್ಯದ ಹೊತ್ತಿಗೆ ಒಂದು ಸಾವಿರ ಸಾಮಾನ್ಯ ಬೋಗಿಗಳನ್ನು ಸೇರಿಸಲಾಗುವುದು.
ಇಂಥ ಹತ್ತು ಸಾವಿರ ಕೋಚುಗಳ ನಿರ್ಮಾಣದತ್ತ ಯೋಜನೆ ರೂಪಿಸಲಾಗಿದೆ' ಎಂದು ತಿಳಿಸಿದರು.
'ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಯಡಿ 1,300 ನಿಲ್ದಾಣಗಳ ಮರು ನಿರ್ಮಾಣ ಕಾಮಗಾರಿಯನ್ನು ಭಾರತೀಯ ರೈಲ್ವೆ ಕೈಗೆತ್ತಿಕೊಂಡಿದೆ. ಅಮೃತ್ ಭಾರತ್ ಯೊಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಗಳು ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡದು' ಎಂದರು.
'ಇದರಡಿಯಲ್ಲಿ ಹಲವು ನಿಲ್ದಾಣಗಳು ₹700 ಕೋಟಿಯಿಂದ ₹800 ಕೋಟಿಯ ವೆಚ್ಚದಲ್ಲಿ ಮರು ನಿರ್ಮಾಣವಾದರೆ, ಇನ್ನೂ ಕೆಲ ನಿಲ್ದಾಣಗಳು ₹100 ಕೋಟಿಯಿಂದ ₹200 ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳುತ್ತಿವೆ. ಈ ಎಲ್ಲಾ ಯೋಜನೆಗಳು ಪೂರ್ಣಗೊಂಡ ಬಳಿಕ ಭಾರತೀಯ ರೈಲ್ವೆಯ ಆಧುನೀಕರಣದ ಮೂಲಕ ಜನರ ನಿರೀಕ್ಷೆಯನ್ನು ಇನ್ನಷ್ಟು ಎತ್ತರಕ್ಕೆ ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ' ಎಂದು ಸಚಿವ ಅಶ್ವಿನಿ ತಿಳಿಸಿದರು.