ಗುವಾಹಟಿ: 'ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ'ಯನ್ನು (ಎಎಫ್‌ಎಸ್‌ಪಿಎ) ಹಿಂಪಡೆಯಲು ಮತ್ತು ಸಂಘರ್ಷ ಪೀಡಿತ ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಸಾವಿರಾರು ಜನರು ಇಂಫಾಲ್‌ನಲ್ಲಿ ಬೀದಿಗಿಳಿದಿದ್ದಾರೆ.
ಹಿಂಸಾಚಾರ ಪೀಡಿತ ಜಿರೀಬಾಮ್ ಸೇರಿದಂತೆ ಮಣಿಪುರದ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ನವೆಂಬರ್ 14ರಂದು ಎಎಫ್‌ಎಸ್‌ಪಿಎ ಅನ್ನು ಪುನಃ ಜಾರಿಗೊಳಿಸಿತ್ತು.
ಪ್ರಸ್ತುತ 13 ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಹೊರತುಪಡಿಸಿ ಇಡೀ ರಾಜ್ಯ ಎಎಫ್‌ಎಸ್‌ಪಿಎ ಅಡಿಯಲ್ಲಿದೆ.
ಎಎಫ್‌ಎಸ್‌ಪಿಎ ಕಾಯ್ದೆಯು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಬ್ಯಾನರ್ ಮತ್ತು ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ.
ಎಎಫ್‌ಎಸ್‌ಪಿಎ ಜಾರಿ ಒಂದು ಘೋರ ಕೃತ್ಯವಾಗಿದೆ. ಕೇಂದ್ರ ಸರ್ಕಾರ ಮಾನವ ಹಕ್ಕುಗಳನ್ನು ಗೌರವಿಸುವುದಾದರೇ ಕೂಡಲೇ ಕಾಯ್ದೆಯನ್ನು ರದ್ದುಗೊಳಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ ಜಾರಿ ಹೆಸರಿನಲ್ಲಿ ಕ್ರೂರ ಕಾಯ್ದೆಯನ್ನು ಬಳಸುವುದು ಸ್ವೀಕಾರಾರ್ಹವಲ್ಲ. ಏಕೆಂದರೆ ಅಂತಹ ಕಾಯ್ದೆಯಿಂದ ಮಣಿಪುರದಲ್ಲಿ ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ' ಎಂದು ಪ್ರತಿಭಟನಾಕಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಜಿರೀಬಾಮ್ ಜಿಲ್ಲೆಯಲ್ಲಿ ಬಂಡುಕೋರರು ಮೂವರು ಮಹಿಳೆಯರು ಮತ್ತು ಶಿಶುಗಳ ಹತ್ಯೆ ಮಾಡಿದ್ದರಿಂದ ಆಕ್ರೋಶಗೊಂಡ ಜನರು ನಡೆಸಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
ಕುಪಿತಗೊಂಡ ಜನರ ಗುಂಪು ಬಿಜೆಪಿಯ ಮೂವರು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿತ್ತು. ಅದರಲ್ಲಿ ಒಬ್ಬರು ಸಚಿವರ ಮನೆಯೂ ಸೇರಿದೆ. ಕಾಂಗ್ರೆಸ್‌ನ ಶಾಸಕರೊಬ್ಬರ ಮನೆಗೂ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಶಾಸಕರ ಮನೆಯಲ್ಲಿ ಯಾರೂ ಇರಲಿಲ್ಲ. ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪೂರ್ವಜರ ಮನೆಗೆ ಪ್ರತಿಭಟನಕಾರರ ಗುಂಪು ನುಗ್ಗಲು ಯತ್ನಿಸಿದರೂ ಭದ್ರತಾ ಪಡೆಗಳು ಈ ಪ್ರಯತ್ನವನ್ನು ವಿಫಲಗೊಳಿಸಿತ್ತು.
ಗಲಭೆ ಪೀಡಿತ ಜಿಲ್ಲೆಗಳಾದ ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ಬಿಷ್ಣುಪುರ್, ತೌಬಲ್, ಕಾಕ್‌ಚಿಂಗ್, ಕಾಂಗ್‌ಪೋಕ್ಪಿ, ಚುರಾಚಾಂದ್‌ಪುರ ವ್ಯಾಪ್ತಿಯಲ್ಲಿ ಇಂಟರ್‌ನೆಟ್ ಸೇವೆಯನ್ನು ಸರ್ಕಾರ ರದ್ದುಪಡಿಸಿತ್ತು.
ಕಳೆದ ವರ್ಷ ಮೇ 3ರಂದು ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ಆರಂಭವಾದಾಗಿನಿಂದಲೂ ನೂರಾರು ಮಂದಿಯನ್ನು ಹತ್ಯೆ ಮಾಡಲಾಗಿದೆ.