ತಿರುಪತಿ: ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದ ಯಾತ್ರಾರ್ಥಿಗಳ ಸೇವೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ವೃದ್ಧಿಸುವ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆ(ಎಐ) ಚಾಟ್‌ಬಾಟ್ ಮೂಲಕ ಸ್ವಯಂಚಾಲಿತ ವ್ಯವಸ್ಥೆ ಜಾರಿಗೆ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ನಿರ್ಧರಿಸಿದೆ.
ಒಟ್ಟಾರೆ ಪಾರದರ್ಶಕತೆ ಮತ್ತು ದಕ್ಷತೆಯನ್ನು ಸುಧಾರಿಸುವ ಜೊತೆಗೆ ವಸತಿ, ದರ್ಶನ ಮತ್ತು ಇತರ ಸೇವೆಗಳನ್ನು ತ್ವರಿತಗೊಳಿಸಲು ದೇವಾಲಯದ ಆಡಳಿತವು ಭವಿಷ್ಯದ ತಂತ್ರಜ್ಞಾನಗಳನ್ನು ಅನುಸರಿಸಲು ಚಿಂತಿಸುತ್ತಿದ್ದೇವೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ(ಇಒ) ಜೆ ಶ್ಯಾಮಲಾ ರಾವ್ ಹೇಳಿದ್ದಾರೆ.
ಬಹುಸಂಖ್ಯೆಯಲ್ಲಿ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ವಸತಿ, ದರ್ಶನ ಮತ್ತು ಇತರ ಸೇವೆಗಳನ್ನು ವೇಗಗೊಳಿಸಲು ಮತ್ತು ಪಾರದರ್ಶಕತೆ ಹಾಗೂ ದಕ್ಷತೆಯನ್ನು ಹೆಚ್ಚಿಸಲು ಟಿಟಿಡಿ ಹಸ್ತಚಾಲಿತ ಕಾರ್ಯಾಚರಣೆಗಳ ಬದಲಿಗೆ ಯಾಂತ್ರೀಕೃತಗೊಳಿಸುವಿಕೆಯನ್ನು ಪರಿಗಣಿಸುತ್ತಿದೆ. ನಾವು ಯಾತ್ರಿಕರ ಸೇವೆಗಳಿಗಾಗಿ ಎಐ ಚಾಟ್‌ಬಾಟ್ ಅನ್ನು ಪರಿಚಯಿಸಲು ಚಿಂತಿಸುತ್ತಿದ್ದೇವೆ ಎಂದು ರಾವ್ ಹೇಳಿದ್ದಾರೆ.
ಇಒ ಪ್ರಕಾರ, ತಿರುಮಲದ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಪಾವಿತ್ರ್ಯತೆಯನ್ನು ಮುಂದಿನ ಪೀಳಿಗೆಗಾಗಿ ಕಾಪಾಡಿಕೊಳ್ಳುವ ಜೊತೆಗೆ ತಂತ್ರಜ್ಞಾನ ಬಳಸಿಕೊಂಡು ಯಾತ್ರಾರ್ಥಿಗಳ ಸೇವೆಯನ್ನು ಉತ್ತಮಗೊಳಿಸುವುದೇ ಟಿಟಿಡಿಯ ಮೂಲ ಉದ್ದೇಶವಾಗಿದೆ.
ಸಾಂಪ್ರಾಯಿಕತೆ ಜೊತೆಗೆ ಆಧುನಿಕ ತಂತ್ರಜ್ಞಾನದ ಸಮ್ಮಿಳಿತದ ಕುರಿತಂತೆ ಸಿಎಂ ಚಂದ್ರಬಾಬು ನಾಯ್ಡು ದೃಷ್ಟಿಕೋನವನ್ನು ಆಡಳಿತ ಮಂಡಳಿ ಜಾರಿಗೆ ತರಲು ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರದ 'ಸ್ವರ್ಣ ಆಂಧ್ರ-2047' ಉಪಕ್ರಮಕ್ಕೆ ಅನುಗುಣವಾಗಿ ತನ್ನ 'ವಿಷನ್ 2047'ಅಡಿಯಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವನ್ನು ಮಾದರಿ ಯಾತ್ರಾ ಕೇಂದ್ರವಾಗಿ ಪರಿವರ್ತಿಸಲು ಟಿಟಿಡಿ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.