HEALTH TIPS

AI: ಕಟ್ಟಡಗಳ ನಿರ್ಮಾಣದಲ್ಲೂ ಕೃತಕ ಬುದ್ಧಿಮತ್ತೆ

ಸಾಮಾನ್ಯವಾಗಿ ನಿರ್ಮಾಣಕ್ಷೇತ್ರದಲ್ಲಿ ಚದರ ಅಡಿಗಳ ಲೆಕ್ಕಾಚಾರಕ್ಕೆ ಟೇಪನ್ನು ಹಿಡಿದು ಅಳತೆ ಮಾಡುವ, ಎತ್ತರ, ಉದ್ದ, ಅಗಲ, ಗಾತ್ರವನ್ನು ಪರಿಶೀಲಿಸುವ ಎಂಜಿನಿಯರುಗಳು, ಮೇಸ್ತ್ರಿಗಳನ್ನು ನೀವು ನೋಡಿರಬಹುದು. ಇತ್ತೀಚಿನ ದಿನಗಳಲ್ಲಿ ಲೇಸರ್ ಆಧಾರಿತ ಅಳತೆಯ ಮಾಪನಗಳೂ ಸಾಕಷ್ಟು ಬಂದಿವೆ.

ಇವಿದ್ದರೂ ಭೌತಿಕವಾಗಿ ಅಗತ್ಯವುಳ್ಳ ಜಾಗದಲ್ಲಿ ಮನುಷ್ಯನ ಪ್ರಸ್ತುತಿ ಇರಲೇಬೇಕಾಗುತ್ತದೆ. ಆದರೆ, ಅದನ್ನು ಇಲ್ಲವಾಗಿಸಿ, ತನಗೆ ತಾನೇ ಅದೃಶ್ಯವಾಗಿ ಈ ಕೆಲಸ ಮಾಡುವ ಕಲೆಗಾರಿಕೆಯನ್ನು ಈಗ ಕೃತಕ ಬುದ್ಧಿಮತ್ತೆ ಕಂಡುಕೊಂಡಿದೆ!

ಕಟ್ಟಡ ನಿರ್ಮಾಣ ಬಹು ದುಬಾರಿ ಪ್ರಕ್ರಿಯೆ. ಪ್ರತಿ ಚದರ, ಇಂಚು, ಅಡಿಗಳನ್ನು ಲೆಕ್ಕ ಹಾಕಿ ಬಂಡವಾಳ ಹೂಡಿಕೆ, ಲಾಭ- ನಷ್ಟಗಳ ಲೆಕ್ಕಾಚಾರವನ್ನು ಹಾಕಬೇಕಾಗುತ್ತದೆ. ಈ ಲೆಕ್ಕಾಚಾರದಿಂದ ಸಿಗುವ ದತ್ತಾಂಶದ ಆಧಾರದ ಮೇಲೆ ಕಚ್ಛಾ ಸಾಮಗ್ರಿ, ಕೂಲಿಯಾಗಳುಗಳು, ಎಂಜಿನಿಯರುಗಳು ಇತ್ಯಾದಿ ಅಗತ್ಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಅದೂ ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುತ್ತಿರುವ ಕಾರಣ, ವಾಸ್ತುಶಿಲ್ಪದಲ್ಲಿ ಒಂದಿಂಚೂ ಹೆಚ್ಚು ಕಡಿಮೆ ಆಗದಂತೆ ನೋಡಿಕೊಂಡರೆ ಮಾತ್ರ ಸುರಕ್ಷಿತವಾಗಿ ಕಟ್ಟಡವೊಂದನ್ನು ನಿರ್ಮಿಸಬಹುದು; ಆಗ ಆ ಕಟ್ಟಡವೂ ಬಹುಕಾಲ ಬಾಳಿಕೆ ಬರಬಹುದು. ಈ ಸಂಕೀರ್ಣ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಇಡೀ ಈ ಲೆಕ್ಕಾಚಾರದ ಕೆಲಸವನ್ನು ಕೃತಕ ಬುದ್ಧಿಮತ್ತೆಗೆ ಕೊಡಲಾಗಿದೆ. ಕೃತಕ ಬುದ್ಧಿಮತ್ತೆಯು ಸರಿಯಾಗಿ ಅಳೆದು, ತೂಗಿ ದತ್ತಾಂಶವನ್ನು ನೀಡುವುದರ ಜೊತೆಗೆ, ಕಟ್ಟಡ ನಿರ್ಮಾಣಕ್ಕೆ ಏನೇನು ಬೇಕು - ಬೇಡ ಎಂದೂ ನಿಖರವಾಗಿ ಹೇಳುವ ಜಾಣ್ಮೆಯನ್ನು ರೂಢಿಸಿಕೊಂಡಿದೆ.

ಅಮೆರಿಕದ ನ್ಯೂ ಜರ್ಸಿಯ ಹೊಬೊಕೆನ್‌ನಲ್ಲಿ ಇರುವ ಸ್ಟೀವನ್ಸ್ ಕ್ವಾಂಟಮ್‌ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದ ವಿಜ್ಞಾನಿಗಳು ಈ ಸಂಶೋಧನೆಯನ್ನು ಮಾಡಿದ್ದಾರೆ. ವಿಜ್ಞಾನಿ ಯಾಂಗ್ ಮೆಂಗ್ ಸುವಾ ಅವರ ನೇತೃತ್ವದಲ್ಲಿ ರೂಪಿತಗೊಂಡಿರುವ ಈ ಸಂಶೋಧನೆಯು ನಿರ್ಮಾಣಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನೇ ಸ್ಥಾಪಿಸುತ್ತದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಸಾಮಾನ್ಯವಾಗಿ ಕಟ್ಟಡ ನಿರ್ಮಾಣದಲ್ಲಿ ಬಳಕೆಯಾಗುವ ಸಾಮಗ್ರಿಗಳಿಗಿಂತ ವ್ಯರ್ಥವಾಗುವುದೇ ಹೆಚ್ಚು. ಕಚ್ಚಾಸಾಮಗ್ರಿಗಳನ್ನು ಅನಗತ್ಯವಾಗಿ ಕೊಳ್ಳುವುದು, ಬಳಸುವುದು, ಕೊನೆಗೆ ವ್ಯರ್ಥ ಮಾಡುವುದು ಇದ್ದಿದ್ದೇ. ಇದು ಕೆಲವೊಮ್ಮೆ ಶೇ 30ಕ್ಕಿಂತಲೂ ಮೀರಿರುತ್ತದೆ ಎಂದು ಸಂಶೋಧನಾ ದತ್ತಾಂಶಗಳು ಹೇಳುತ್ತವೆ. ಎಂದರೆ ನೀವು 100 ರೂಪಾಯಿಯನ್ನು ನಿರ್ಮಾಣಕ್ಕೆ ಬಳಸುತ್ತಿದ್ದರೆ, ಅದರಲ್ಲಿ 30 ರೂಪಾಯಿ ಅನಗತ್ಯವಾಗಿ ವ್ಯರ್ಥವಾಗುತ್ತದೆ ಎಂದರ್ಥ. ಇದನ್ನು ತಡೆಗಟ್ಟಬಲ್ಲ ಬುದ್ಧಿಶಕ್ತಿಯನ್ನು ಈ ಹೊಸ ತಂತ್ರಜ್ಞಾನ ಒದಗಿಸುತ್ತದೆ.

ಕಾರ್ಯವಿಧಾನ: ಸಂಪೂರ್ಣ ಉಪಗ್ರಹ ಆಧಾರಿತವಾಗಿ ಈ ತಂತ್ರಜ್ಞಾನ ಕಾರ್ಯ ನಿರ್ವಹಿಸುತ್ತದೆ. ಎಂದರೆ, ಅತ್ಯುತ್ತಮ ಇಂಟರ್ನೆಟ್‌ ಸಂಪರ್ಕ ಇರುವ ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರ ಈ ತಂತ್ರಜ್ಞಾನ ಕಾರ್ಯನಿರ್ವಹಿಸಬಲ್ಲದು. ಉಪಗ್ರಹ ಆಧಾರಿತವಾಗಿ ನಿರ್ಮಾಣಕ್ಷೇತ್ರವನ್ನು ಮೊದಲು ವೀಕ್ಷಿಸುವ ಈ ಕೃತಕ ಬುದ್ಧಿಮತ್ತೆಯು ಕಟ್ಟಡ ನಿರ್ಮಾಣದ ನೀಲನಕ್ಷೆಯನ್ನು ಗಮನಿಸಿ ಎಷ್ಟು ಎತ್ತರ, ಅಗಲ, ದಪ್ಪ, ಉದ್ದವಾಗಿ ಕಟ್ಟಡದ ಅಡಿಪಾಯ, ಗೋಡೆಗಳು, ತಾರಸಿ - ಇತ್ಯಾದಿ ರಚನೆಗಳನ್ನು ನಿರ್ಮಿಸಬೇಕು ಎಂಬುದನ್ನು ಮೊದಲು ನೀಡುತ್ತದೆ. ಅಲ್ಲದೇ, ನಿರ್ಮಾಣ ಕ್ಷೇತ್ರದಲ್ಲಿ ಇಂತಷ್ಟೇ ಜಾಗದಲ್ಲಿ ನಿರ್ಮಾಣವಾಗಬೇಕು ಎಂದು ಅದೃಶ್ಯ ಗಡಿರೇಖೆಗಳನ್ನು ರಚಿಸಿಕೊಳ್ಳುತ್ತದೆ. ನಿಗದಿತ ಗಡಿಯ ಆಚೆ ಹೋಗದಂತೆ, ಒಳಗೂ ಬಾರದಂತೆ ನಿರ್ಮಾಣ ಶುರು ಮಾಡವಂತೆ ಸೂಚಿಸುತ್ತದೆ. ಎಂದರೆ, ಕಟ್ಟಡ ನಿರ್ಮಾಣದ ಕಾರ್ಯ ಶುರುವಾಯಿತು ಎಂದುಕೊಳ್ಳಿ. ನಿರ್ಮಾಣದ ಸಮಯದಲ್ಲಿ ಕಟ್ಟಡದ ಕಾರ್ಮಿಕರು ಅಥವಾ ಮೇಸ್ತ್ರಿಗಳು ಒಂದೇ ಒಂದು ಮಿಲಿ ಮೀಟರ್ ಆಚೀಚೆ ಗೋಡೆ ಕಟ್ಟಿದರೆ, ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಈ ಕೃತಕ ಬುದ್ಧಿಮತ್ತೆಯು ಎಚ್ಚರಿಕೆ ಗಂಟೆಯನ್ನು ಮೊಳಗಿಸುತ್ತದೆ. ಆಗ ಅದನ್ನು ಸರಿಪಡಿಸಿಕೊಳ್ಳುವ ಅವಕಾಶ ಸಿಗುತ್ತದೆ. ಹೀಗೆ, ನಿರ್ಮಾಣಕಾರ್ಯದ ಅಡಿಪಾಯದಿಂದ ಶುರುವಾಗಿ ಕೊನೆಯ ಅಂತಸ್ತಿನ ತಾರಸಿಯವರೆಗೂ ನಿರ್ಮಾಣಕಾರ್ಯದ ಮೇಲುಸ್ತುವಾರಿಯನ್ನು ಈ ಕೃತಕ ಬುದ್ಧಿಮತ್ತೆಯು ಉಪಗ್ರಹದ ಸಹಾಯದಿಂದ ನಡೆಸುತ್ತಿರುತ್ತದೆ. ಜೊತೆಗೆ, ನಿರ್ಮಾಣದ ಎಲ್ಲ ಹಂತದ ಫೋಟೊಗಳು, ವಿಡಿಯೊಗಳು ದಾಖಲಾಗಿರುತ್ತವೆ. ಹಾಗಾಗಿ, ನಿರ್ಮಾಣಕಾರ್ಯದಲ್ಲಿ ಪಾರದರ್ಶಕತೆ ಸಿಗುತ್ತದೆ. ಆದ್ದರಿಂದ ಕಟ್ಟಡದ ಮಾಲೀಕರಿಗೆ ನಿರ್ಮಾಣಕಾರ್ಯದಲ್ಲಿ ಯಾವುದೇ ಮೋಸವಾಗುತ್ತಿಲ್ಲ ಎಂಬ ಸ್ಪಷ್ಟತೆ ಸಿಗುತ್ತದೆ; ಮೋಸವಾದಲ್ಲಿ ಅದನ್ನು ಸಾಕ್ಷಿ ಸಮೇತವಾಗಿ ಸಾಬೀತು ಮಾಡುವ ಅವಕಾಶವೂ ಸಿಗುತ್ತದೆ. ಇದರಿಂದ ಕಟ್ಟಡ ನಿರ್ಮಾಣಕಾರ್ಯದಲ್ಲಿ ಕಾನೂನಾತ್ಮಕ ರಕ್ಷಣೆಯೂ ಕಟ್ಟಡ ಮಾಲೀಕರಿಗೆ ಅಥವಾ ಬಂಡವಾಳ ಹೂಡಿಕೆ ಮಾಡುವವರಿಗೆ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣವು ಐಷಾರಾಮಿಯಾಗಿಯೂ ವೈಜ್ಞಾನಿಕವಾಗಿ ನಿರ್ಮಾಣವಾಗಬೇಕೆಂಬ ನಿರೀಕ್ಷೆಯನ್ನು ಪೂರೈಸುವ ಅವಕಾಶ ಸಿಗುತ್ತದೆ. ನಿರ್ಮಾಣಕಾರ್ಯ ತ್ವರಿತವಾಗಿಯೂ ನಡೆಯುತ್ತದೆ. ಸುಮಾರು ಶೇ 10ರಷ್ಟು ನಿರ್ಮಾಣಸಮಯವನ್ನು ಉಳಿಸಬಹುದು. ಸಾಕಷ್ಟು ಬಂಡವಾಳವನ್ನೂ ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ, ವಿಜ್ಞಾನಿ ಸುವಾ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries