ವಾಷಿಂಗ್ಟನ್: ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಒಪನ್‌ಎಐ ಕಂಪನಿ ಉದ್ಯೋಗಿ ಹಾಗೂ ಅನ್ಯಾಯಗಳ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದ ಸುಚಿರ್ ಬಾಲಾಜಿ ಅವರ ಸಾವು ಆತ್ಮಹತ್ಯೆಯಂತೆ ಕಾಣುತ್ತಿಲ್ಲ ಎಂದು ಸ್ಪೇಸ್‌ಎಕ್ಸ್‌ನ ಮುಖ್ಯಸ್ಥ ಇಲಾನ್ ಮಸ್ಕ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುಚಿರ್ ಅವರ ತಾಯಿ ಪೂರ್ಣಿಮಾ ರಾಮಾರಾವ್ ಅವರೂ, ಇದೊಂದು ವ್ಯವಸ್ಥಿತ ಸಂಚು ರೂಪಿಸಿದ ಕೊಲೆಯಾಗಿದ್ದು, ಈ ಕುರಿತು ಎಫ್‌ಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಚುನಾಯಿತ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸುಚಿರ್ ಸಾವಿಗೆ ಸಂಬಂಧಿಸಿದಂತೆ, ಅಸ್ತಿತ್ವಕ್ಕೆ ಬರಲಿರುವ ಟ್ರಂಪ್ ಸರ್ಕಾರದಲ್ಲಿ ಮುಖ್ಯ ಸ್ಥಾನಕ್ಕೆ ನೇಮಕಗೊಂಡಿರುವ ಇಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಅವರನ್ನು ಟ್ಯಾಗ್ ಮಾಡಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪೂರ್ಣಿಮಾ, 'ಈ ಪ್ರಕರಣದಲ್ಲಿ ಖಾಸಗಿ ತನಿಖಾ ಸಂಸ್ಥೆಯಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆದರೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ' ಎಂದಿದ್ದಾರೆ.
'ಆದರೆ ಸುಚಿರ್ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿ ವಸ್ತುಗಳು ಚೆಲ್ಲಾಪಿಲ್ಲಿ ಆಗಿವೆ. ಸ್ನಾನಗೃಹದಲ್ಲಿ ರಕ್ತದ ಕಲೆಗಳಿವೆ. ಅಲ್ಲಿ ಆತನನ್ನು ಹೊಡೆದಿರುವ ಶಂಕೆ ಇದ್ದು, ಒದ್ದಾಡಿರುವ ಕುರುಹುಗಳಿವೆ. ಇದೊಂದು ಕೋಲ್ಡ್ ಬ್ಲಡ್ ಕೊಲೆಯಾಗಿದ್ದು, ಪೊಲೀಸರು ಮಾತ್ರ ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ. ಸ್ಯಾನ್‌ಫ್ರಾನ್ಸಿಸ್ಕೊ ನಗರದ ಅಧಿಕಾರಿಗಳು ನ್ಯಾಯ ಪಡೆಯುವುದರಿಂದ ನಮ್ಮನ್ನು ತಡೆಯುತ್ತಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಎಫ್‌ಬಿಐ ತನಿಖೆ ನಡೆಸಬೇಕು' ಎಂದು ಒತ್ತಾಯಿಸಿದ್ದಾರೆ.
ಪೂರ್ಣಿಮಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮಸ್ಕ್, 'ಇದು ಆತ್ಮಹತ್ಯೆಯಂತೆ ಕಾಣಿಸುತ್ತಿಲ್ಲ' ಎಂದಿದ್ದಾರೆ.
ಓಪನ್‌ಎಐನ ಸಂಸ್ಥಾಪಕರಲ್ಲಿ ಮಸ್ಕ್ ಕೂಡಾ ಒಬ್ಬರಾಗಿದ್ದರೂ, ಕಂಪನಿಯ ಸದ್ಯದ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರೊಂದಿಗೆ ಇಲಾನ್ ಸಂಬಂಧ ಹಳಸಿದೆ.
26 ವರ್ಷದ ಸುಚಿರ್ ಬಾಲಾಜಿ ಅವರು ನ. 26ರಂದು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮೃತಪಟ್ಟಿದ್ದರು. ತಾವು ಕಾರ್ಯನಿರ್ವಹಿಸುವ ಕಂಪನಿಯ ಅಭಿವೃದ್ಧಿಪಡಿಸುವ ಕೃತಕ ಬುದ್ಧಿಮತ್ತೆಯ ಕುರಿತು ಅವರು ಸಾಕಷ್ಟು ಬಾರಿ ಎಚ್ಚರಿಕೆಯ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದರು. ಇದರಿಂದ ಕಂಪನಿ ಹಲವು ಬಾರಿ ಕಾನೂನು ಸಂಘರ್ಷ ಎದುರಿಸಬೇಕಾದ ಸ್ಥಿತಿಗೂ ತಲುಪಿತ್ತು. ಜೆನರೇಟಿವ್ ಎಐ ಗಾಗಿ ಒಪನ್‌ಎಐ ಹೊಂದಿದ್ದ ತರಬೇತಿ ಮಾದರಿಯ ಸಾಚಾತನವನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದರು.
ತಮ್ಮದೇ ಅಂತರ್ಜಾಲ ತಾಣ ಹೊಂದಿದ್ದ ಸುಚಿರ್ ಅವರ 2024ರ ಅಕ್ಟೋಬರ್‌ನಲ್ಲಿ ಪೋಸ್ಟ್ ಮಾಡಿ, 'ಜನರೇಟಿವ್ ಮಾದರಿಗಳು ತರಬೇತಿ ಇನ್‌ಪುಟ್‌ಗಳನ್ನೇ ಅಪರೂಪಕ್ಕೆ ಉತ್ತರವಾಗಿ ನೀಡುತ್ತವೆ. ಆದರೆ ತರಬೇತಿಗಾಗಿ ಸೃಜಿಸುವ ಮಾದರಿಗಳು ಕಾಪಿರೈಟ್ ಡಾಟಾಗಳೇ ಆಗಿರುತ್ತವೆ. ಅನಧಿಕೃತವಾಗಿ ಇಂಥ ಮಾಹಿತಿಯನ್ನು ಪಡೆದು, ನೀಡುವುದು ಕಾನೂನುಬಾಹಿರ' ಎಂದು ಬರೆದುಕೊಂಡಿದ್ದರು.