ಸಂಭಲ್ : ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಪತ್ತೆಯಾಗಿರುವ, ಸಂಭಲ್ ಜಿಲ್ಲೆಯ ಕಗ್ಗು ಸರಾಯ್ ಎಂಬ ಪ್ರದೇಶದಲ್ಲಿನ ಭಸ್ಮ ಶಂಕರ ದೇವಸ್ಥಾನ ಹಾಗೂ ಅಲ್ಲಿರುವ ಬಾವಿ ಕುರಿತು 'ಕಾರ್ಬನ್ ಡೇಟಿಂಗ್' ಪರೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಜಿಲ್ಲಾಡಳಿತ ಪತ್ರ ಬರೆದಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
'ಇದು ಕಾರ್ತೀಕ ಮಹಾದೇವ ದೇಗುಲ. ಇಲ್ಲಿರುವ ಬಾವಿಯನ್ನು 'ಅಮೃತ ಕೂಪ' ಎಂದು ಕರೆಯಲಾಗುತ್ತದೆ. ಈ ಕುರಿತು ಕಾರ್ಬಲ್ ಡೇಟಿಂಗ್ ಪರೀಕ್ಷೆಗಾಗಿ ಎಎಸ್‌ಐಗೆ ಪತ್ರ ಬರೆಯಲಾಗಿದೆ' ಎಂದು ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ತಿಳಿಸಿದ್ದಾರೆ.
'ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ಪೂಜೆ ಸೇರಿದಂತೆ ಧಾರ್ಮಿಕ ವಿಧಿಗಳೂ ಆರಂಭವಾಗಿವೆ. ಇಲ್ಲಿನ ಒತ್ತುವರಿಯನ್ನು ಕೂಡ ತೆರವು ಮಾಡಲಾಗಿದೆ' ಎಂದು ತಿಳಿಸಿದ್ದಾರೆ.
'ಭಸ್ಮ ಶಂಕರ ದೇವಸ್ಥಾನ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ದೇಗುಲದ ಬಳಿ ನಿಯಂತ್ರಣ ಕೇಂದ್ರವನ್ನು ಕೂಡ ಸ್ಥಾಪಿಸಲಾಗಿದ್ದು, ಪ್ರಾಂತೀಯ ಸಶಸ್ತ್ರ ಪೊಲೀಸರನ್ನು (ಪಿಎಸಿ) ನಿಯೋಜಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕುಮಾರ್ ತಿಳಿಸಿದ್ದಾರೆ.
ಪುರಾತತ್ವ ಕಲಾಕೃತಿಗಳು ಯಾವ ಕಾಲ ಅಥವಾ ಯುಗಕ್ಕೆ ಸಂಬಂಧಿಸಿದವು ಎಂಬುದನ್ನು ಪತ್ತೆ ಮಾಡುವುದಕ್ಕೆ 'ಕಾರ್ಬನ್ ಡೇಟಿಂಗ್' ಪರೀಕ್ಷೆ ನಡೆಸಲಾಗುತ್ತದೆ.
ಭಸ್ಮ ಶಂಕರ ದೇವಸ್ಥಾನದಲ್ಲಿ ಹನುಮಂತನ ಮೂರ್ತಿ ಹಾಗೂ ಶಿವಲಿಂಗ ಇವೆ. 1978ರಲ್ಲಿ ನಡೆದ ಕೋಮುಗಲಭೆ ವೇಳೆ ಈ ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತು. ಅಲ್ಲದೇ, ಇಲ್ಲಿನ ಹಿಂದೂಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದ ಈ ದೇವಸ್ಥಾನವನ್ನು ಅಧಿಕಾರಿಗಳು ಶುಕ್ರವಾರ ಭಕ್ತರಿಗೆ ಮುಕ್ತಗೊಳಿಸಿದ್ದಾರೆ.
ಈ ದೇವಸ್ಥಾನ ಶಾಹಿ ಜಾಮಾ ಮಸೀದಿ ಬಳಿಯೇ ಇದೆ. ಮಸೀದಿಯ ಸಮೀಕ್ಷೆಗೆ ಕೋರ್ಟ್ ಆದೇಶ ನೀಡಿದ ಬಳಿಕ ನ.24ರಂದು ನಡೆದ ಗಲಭೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಅದಾದ ಕೆಲವು ವಾರಗಳ ನಂತರ ಜಿಲ್ಲಾಡಳಿತವು ಈ ಮಸೀದಿಯ ಸುತ್ತಲಿನ ಪ್ರದೇಶದಲ್ಲಿ ಒತ್ತುವರಿ ತೆರವು ಹಾಗೂ ವಿದ್ಯುತ್ ಕಳವು ವಿರುದ್ಧ ಕಾರ್ಯಾಚರಣೆ ಕೈಗೊಂಡಿತ್ತು.