ಮುಂಬೈ: ಜೈಲಿನಲ್ಲಿ ಹೆರಿಗೆಯಾದರೆ ಅಲ್ಲಿನ ವಾತಾವರಣವು ತಾಯಿ ಮತ್ತು ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ಮಾದಕವಸ್ತುಗಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿದ್ದ ಗರ್ಭಿಣಿಯೊಬ್ಬರಿಗೆ 6 ತಿಂಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿರುವ ನಾಗ್ಪುರ ಪೀಠದ ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಪಾಲ್ಕೆ, 'ಪ್ರತಿಯೊಬ್ಬ ಖೈದಿಗೂ ಘನತೆಯಿರುತ್ತದೆ' ಎಂದು ಹೇಳಿದೆ.
ರೈಲಿನಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಸುರಭಿ ಸೋನಿ ಮತ್ತು ನಾಲ್ವರನ್ನು ರೈಲ್ವೆ ಭದ್ರತಾ ಪಡೆ 2024ರ ಏಪ್ರಿಲ್‌ನಲ್ಲಿ ಬಂಧಿಸಿತ್ತು. ಈ ವೇಳೆ ಸುರಭಿ ಸೋನಿ ಎರಡು ತಿಂಗಳ ಗರ್ಭಿಣಿಯಾಗಿದ್ದರು.
ಮಾನವೀಯತೆಯ ಆಧಾರದಲ್ಲಿ ಜಾಮೀನು ನೀಡಿ ಕಾರಾಗೃಹದ ಹೊರಗೆ ಮಗುವಿಗೆ ಜನ್ಮ ನೀಡಲು ಅವಕಾಶ ಕಲ್ಪಿಸಬೇಕೆಂದು ಕೋರಿ ಸುರಭಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಹಿಳೆಯ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಾಸಿಕ್ಯೂಷನ್ ಸುರಕ್ಷಿತ ಹೆರಿಗೆಗೆ ಕಾರಾಗೃಹದಲ್ಲೇ ಕ್ರಮ ವಹಿಸುವುದಾಗಿ ತಿಳಿಸಿತ್ತು.
'ಜೈಲಿನಲ್ಲಿರುವ ಗರ್ಭಿಣಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬಹುದು. ಆದರೆ ಜೈಲಿನ ವಾತಾವರಣವು ತಾಯಿಯ ಮೇಲೆ ಮಾತ್ರವಲ್ಲದೇ ಮಗುವಿನ ಮೇಲೆಯೂ ಪರಿಣಾಮ ಬೀರುತ್ತದೆ. ಈ ಬಗ್ಗೆ ಯಾರೂ ಗಮನಹರಿಸುವುದಿಲ್ಲ' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
'ಈ ಪ್ರಕರಣವನ್ನು ಮಾನವೀಯತೆಯ ಆಧಾರದಲ್ಲಿ ಪರಿಗಣಿಸುವ ಅಗತ್ಯವಿದೆ. ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಗಳಿರಬಹುದು. ಆದರೆ ಮಹಿಳೆಯನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸುವುದರಿಂದ ತನಿಖೆಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ' ಎಂದು ಕೋರ್ಟ್ ಹೇಳಿದೆ.