ತಿರುವನಂತಪುರಂ: ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತಾದಿಗಳು, ಅತಿಯಾದ ಅಲಂಕಾರ ನಡೆಸುವ ವಾಹನಗಳ ಬಗ್ಗೆ ನಿಗಾಯಿರಿಸಲು ಹಾಗೂ ಇಂತಹ ವಾಹನಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಕೇರಳ ಮೋಟಾರು ವಾಹನ ಇಲಾಖೆ ತೀರ್ಮಾನಿಸಿದೆ.
ಕೆಲವೊಂದು ವಾಹನಗಳನ್ನು ಶಬರಿಮಲೆ ಕ್ಷೇತ್ರದ ಮಾದರಿಯಲ್ಲಿ ಅಲಂಕಾರ ನಡೆಸುತ್ತಿರುವುದು ಅಲ್ಲದೆ ಅತಿಯಾದ ತಳಿರುತೋರಣ ಅಳವಡಿಸುವುದು ನಡೆದುಬರುತ್ತಿದ್ದು, ಇದು ವಾಹನಗಳ ಅಪಘಾತಕ್ಕೂ ಕಾರಣವಾಗಬಲ್ಲುದು. ಇಂತಹ ವಾಹನಗಳಿಂದ ಕಡಿದಾದ ತಿರುವು, ಅರಣ್ಯ ಪ್ರದೇಶಗಳಲ್ಲ ಸಂಚರಿಸುವ ಸಂದರ್ಭ ಹೆಚ್ಚಿನ ಅಪಘಾತ ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ ಅತಿಯಾಗಿ ಅಲಂಕಾರ ನಡೆಸಿ ಸಾಗುವುದರಿಂದ ಎದುರುನ ವಾಹನಗಳ ಚಾಲಕರ ಗಮನ ಬೇರೆಡೆ ಸಾಗುವ ಸಧ್ಯತೆಯೂ ಇರುವುದರಿಂದ ಇಂತಹ ಅಲಂಕಾರಗಳಿಗೆ ಕಡಿವಾಣ ಹಾಕಲೂ ಇಲಾಖೆ ತೀರ್ಮಾನಿಸಿದೆ. ಶಬರಿಮಲೆ ಯಾತ್ರೆ ಕೈಗೊಳ್ಳುವ ಕೆಲವೊಂದು ಘನ ವಾಹನಗಳು ಹೆಚ್ಚುವರಿ ಲೈಟು, ಕರ್ಕಶ ಹಾರ್ನ್, ಏರುಸ್ವರದಲ್ಲಿ ಹಾಡುಗಳೊಂದಿಗೆ ಸಂಚರಿಸುತ್ತಿರುವ ಬಗ್ಗೆಯೂ ಮೋಟಾರು ವಾಹನ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಇನ್ನು ಹಾದಿ ಮಧ್ಯೆ ಭಕ್ತಾದಿಗಳು ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುತಿರುವುದೂ ಗಮನಕ್ಕೆ ಬಂದಿದ್ದು, ಇದು ವನ್ಯ ಜೀವಿಗಳ ಮಾರಕವಾಗಿ ಪರಿಣಮಿಸಲಿದೆ.
ಅತಿಯಾದ ರೀತಿಯಲ್ಲಿ ಅಲಂಕರಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದ ಕೆಲವು ಆಟೋರಿಕ್ಷಾಗಳನ್ನು ಇತ್ತೀಚೆಗೆ ವಶಕ್ಕೆ ತೆಗೆದು, ನಂತರ ಅದರಲ್ಲಿನ ಭಕ್ತರನ್ನು ಬೇರೆ ವಾಹನಗಳಲ್ಲಿ ಪಂಪೆಗೆ ಕಳುಹಿಸುವ ವ್ಯವಸ್ಥೆಯನ್ನೂ ಮೋಟಾರು ವಾಹನ ಇಲಾಖೆ ಕೈಗೊಂಡಿತ್ತು. ಈ ಹಿಂದೆ ಕೇವಲ ನಿರ್ದೇಶ ನೀಡಿ ಬಿಡುಗಡೆಗೊಳಿಸುತ್ತಿದ್ದ ಇಲಾಖೆ, ಮುಂದೆ ಆದೇಶ ಉಲ್ಲಂಘಿಸುವ ವಾಹನಗಳಿಗೆ 5 ಸಾವಿರ ರೂ.. ವರೆಗೂ ದಂಡ ವಸೂಲಿಮಾಡಲೂ ತೀರ್ಮಾನಿಸಿದೆ.
ಹೆಲ್ಪ್ ಲೈನ್:
ಶಬರಿಮಲೆ ಯಾತ್ರೆ ಮಧ್ಯೆ ವಾಹನಗಳಿಗೆ ಕೇಡು ಸಂಭವಿಸಿದಲ್ಲಿ ಹಗೂ ತುರ್ತು ಸೇವೆ ಅಗತ್ಯವಿದ್ದಲ್ಲಿ ಸೇಫ್ ಝೋನ್ ಹೆಲ್ಪ್‍ಲೈನ್ ನಂಬರ್‍ಗಳನ್ನು ಮೋಟಾರು ವಾಹನ ಇಲಾಖೆ ಬಿಡುಗಡೆಮಾಡಿದೆ. ಬ್ರೇಕ್ ಡೌನ್ ಅಸಿಸ್ಟೆನ್ಸ್, ಕ್ರೇನ್ ರಿಕವರಿ, ಆಂಬುಲೆನ್ಸ್ ಸೇವೆಗಳನ್ನೂ ಈ ಮೂಲಕ ನೀಡಲಾಗುವುದು. ಹೆಲ್ಪ್‍ಲೈನ್ ಸೇವೆ ಅಗತ್ಯವಿರುವವರು ಮೊಬೈಲ್ ಸಂಖ್ಯೆ(9400044991, 9562318181)ಸಂಪರ್ಕಿಸಬಹುದಗಿದೆ.