HEALTH TIPS

ಸಂಸತ್‌ | ಸದನದ ಮುಂದೆ 'ಕದನ': ಪರಸ್ಪರ ತಳ್ಳಾಟದ ಆರೋಪ

ನವದೆಹಲಿ: ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಆಡಳಿತಾರೂಢ ಎನ್‌ಡಿಎ ಹಾಗೂ ವಿಪಕ್ಷ 'ಇಂಡಿಯಾ' ಮೈತ್ರಿಕೂಟ ಸಂಸತ್‌ ಆವರಣದಲ್ಲಿ ಗುರುವಾರ ನಡೆಸಿದ ಪ್ರತ್ಯೇಕ ಪ್ರತಿಭಟನೆಗಳು ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದವು. 

ತಮ್ಮ ಸಂಸದರ ಮೇಲೆ ಹಲ್ಲೆಗಳನ್ನು ನಡೆಸಲಾಗಿದೆ ಎಂದು ಉಭಯ ಬಣಗಳ ನಾಯಕರು ಆರೋಪ-ಪ್ರತ್ಯಾರೋಪ ಮಾಡಿದರು.

ಎರಡು ಪಕ್ಷಗಳ ನಾಯಕರು ಪರಸ್ಪರರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರುಗಳನ್ನೂ ದಾಖಲಿಸಿದರು. ದೌರ್ಜನ್ಯದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರ ಮೊರೆ ಹೋದರು.

'ಗಾಂಧಿ ಕುಟುಂಬದವರು ಕ್ಷಮೆಯಾಚಿಸಬೇಕು' ಎಂದು ಬಿಜೆಪಿ ಸಂಸದರು ಆಗ್ರಹಿಸಿದರೆ, ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ 'ಕೈ' ಸಂಸದರು 'ಜೈ ಭೀಮ್‌' ಎಂಬ ಘೋಷಣೆ ಮೊಳಗಿಸಿದರು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಯಾಗಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವರಾದ ಶಿವರಾಜ ಸಿಂಗ್ ಚೌಹಾಣ್‌ ಹಾಗೂ ಪೀಯೂಷ್‌ ಗೋಯಲ್‌ ಅವರು ಗಾಂಧಿ ಕುಟುಂಬದ ವಿರುದ್ಧ ಟೀಕಾಪ್ರಹಾರ ಮಾಡಿದರು.

'ಇಬ್ಬರು ಸಂಸದರನ್ನು ತಳ್ಳಿದ ರಾಹುಲ್‌'

'ಸಂಸತ್‌ ಭವನದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ನಮ್ಮ ಪಕ್ಷದ ಸಂಸದರನ್ನು ತಳ್ಳಿದ್ದಾರೆ. ಹೀಗಾಗಿ, ಇಬ್ಬರು ಸಂಸದರ ತಲೆಗೆ ಗಾಯಗಳಾಗಿವೆ' ಎಂದು ಬಿಜೆಪಿ ಅರೋಪಿಸಿದೆ. 'ಕಾಂಗ್ರೆಸ್‌ನ ಈ ನಾಯಕ ತುಂಬಾ ಹತ್ತಿರಕ್ಕೆ ಬಂದು ಜೋರಾಗಿ ಕಿರುಚಿದ್ದಾರೆ' ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯೆ ಎಸ್‌.ಫಾಂಗ್ಯಾನ್‌ ಕೊನ್ಯಾಕ್‌ ಆರೋಪಿಸಿದರು.

ಗಾಯಗೊಂಡಿರುವ ಸಂಸದರಾದ ಪ್ರತಾಪ್ ಸಾರಂಗಿ ಹಾಗೂ ಮುಕೇಶ್‌ ರಜಪೂತ್‌ ಅವರನ್ನು ರಾಮ ಮನೋಹರ ಲೋಹಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ, ರಾಹುಲ್‌ ವಿರುದ್ಧ ಮಾಜಿ ಸಚಿವ ಅನುರಾಗ್‌ ಠಾಕೂರ್ ಸೇರಿದಂತೆ ಬಿಜೆಪಿಯ ಸಂಸದರು ಪಾರ್ಲಿಮೆಂಟ್‌ ಸ್ಟ್ರೀಟ್‌ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿದೆ.

ಸಂಸತ್‌ನ ಮಕರ ದ್ವಾರದ ಮುಂಭಾಗದಲ್ಲಿ ಪ್ರತಿಭಟನೆನಿರತ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಮುಖಾಮುಖಿಯಾದರು. ಆಗ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ, 'ರಾಹುಲ್‌, ನಿಮಗೆ ನಾಚಿಕೆಯಾಗುವುದಿಲ್ಲವೇ? ನೀವು ರೌಡಿ ವರ್ತನೆ ತೋರಿದ್ದೀರಿ? ವೃದ್ದ ಸಂಸದನನ್ನು ತಳ್ಳಿದ್ದೀರಿ' ಎಂದು ಪ್ರಶ್ನಿಸಿದರು. ರಾಹುಲ್‌ ಪ್ರತಿಕ್ರಿಯಿಸಿ, 'ಅವರು ನನ್ನನ್ನು ತಳ್ಳಿದರು' ಎಂದರು. ಸಾರಂಗಿ ಅವರನ್ನು ನೋಡಿದ ನಂತರ ವಿಪಕ್ಷ ನಾಯಕ ಅಲ್ಲಿಂದ ತೆರಳಿದರು. 'ಸಂಸದರೊಬ್ಬರನ್ನು ರಾಹುಲ್‌ ತಳ್ಳಿದರು. ಅವರು ನನ್ನ ಮೇಲೆ ಬಿದ್ದ ಪರಿಣಾಮ ಗಾಯಗೊಂಡೆ' ಎಂದು ಸಾರಂಗಿ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯಸಭೆಯ ಮಧ್ಯಾಹ್ನದ ಕಲಾಪವು ಗದ್ದಲದ ದೃಶ್ಯಗಳಿಗೆ ಸಾಕ್ಷಿಯಾಯಿತು. ಲೋಕಸಭೆ ವಿರೋಧಪಕ್ಷದ ನಾಯಕನ ವಿರುದ್ಧ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದರು. ನಮ್ಮ ಪಕ್ಷದ ಸಂಸದರ ಮೇಲೆ ಅವರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪ ಮಾಡಿದರು. ರಾಹುಲ್‌ ವರ್ತನೆ ತುಂಬಾ ನೋವನ್ನು ಉಂಟು ಮಾಡಿದೆ ಎಂದು ಕೊನ್ಯಾಕ್‌ ಅವರು ಸದನಕ್ಕೆ ತಿಳಿಸಿದರು.

'ದೂರನ್ನು ಸಲ್ಲಿಸಲು ಅವರು ನನ್ನನ್ನು ಭೇಟಿ ಮಾಡಿದ್ದರು ಹಾಗೂ ಘಟನೆ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಕಣ್ಣೀರು ಹಾಕಿದರು' ಎಂದು ಸಭಾಪತಿ ಜಗದೀಪ್‌ ಧನಕರ್‌ ಸದನಕ್ಕೆ ಹೇಳಿದರು. ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದ್ದರಿಂದ ಲೋಕಸಭೆಯಲ್ಲಿ ಐದು ನಿಮಿಷವಷ್ಟೇ ಕಲಾಪ ನಡೆಯಿತು.

ಈ ಸಂಬಂಧ ಕಾಂಗ್ರೆಸ್‌ ಸಂಸದ ಹಿಬಿ ಈಡನ್ ಅವರು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಆರೋಪ ತಳ್ಳಿ ಹಾಕಿದ್ದರು. 'ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್‌ ಜತೆಗಿದ್ದೆ. ಯಾವುದೇ ಹಂತದಲ್ಲಿ ಸಂಸದೆಯ ಸಮೀಪದವರೆಗೆ ನಮ್ಮ ನಾಯಕ ಹೋಗಿರಲಿಲ್ಲ. ಚಾರಿತ್ರ್ಯಹನನ ಮಾಡಲು ಬಿಜೆಪಿಯವರು ಹೆಣೆದಿರುವ ಕಟ್ಟು ಕಥೆ ಇದು' ಎಂದು ಪತ್ರದಲ್ಲಿ ದೂರಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, 'ಕಾಂಗ್ರೆಸ್ ನಾಯಕರ ವರ್ತನೆ ನಾಚಿಕೆಗೇಡಿತನದ್ದು. ಕಾಂಗ್ರೆಸ್‌ ಸಂಸದರು ದೇಶ ಹಾಗೂ ಸಂಸತ್‌ನ ಕ್ಷಮೆಯಾಚಿಸಬೇಕು' ಎಂದು ಆಗ್ರಹಿಸಿದರು. ರಾಹುಲ್‌ ವರ್ತನೆ ಖಂಡಿಸಲು ನಿರ್ಣಯ ತರುವುದಾಗಿ ಸಭಾನಾಯಕ ಜೆ.ಪಿ.ನಡ್ಡಾ ಹೇಳಿದರು.

ಇದಕ್ಕೂ ಮುನ್ನ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸಂಸದರು ‍ಪ್ರತ್ಯೇಕವಾಗಿ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ರಾಹುಲ್ ಸದನದೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಬಿಜೆಪಿ ಸಂಸದರು ತಡೆದರು ಎಂದು ಕಾಂಗ್ರೆಸ್‌ ಆರೋಪಿಸಿತು. ಕಾಂಗ್ರೆಸ್‌ ನಾಯಕ ಇಬ್ಬರು ಸಂಸದರನ್ನು ತಳ್ಳಿದರು ಎಂದು ಬಿಜೆಪಿ ಪ್ರತ್ಯಾರೋಪ ಮಾಡಿತು.

ಪ್ರಧಾನಿ ನರೇಂದ್ರ ಮೋದಿ ಅವರು ಸಾರಂಗಿ ಮತ್ತು ರಜಪೂತ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 'ಸಾರಂಗಿ ಅವರಿಗೆ ಆಗಿರುವ ಗಾಯಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಸತ್ತು ದೈಹಿಕ ಶಕ್ತಿ ಪ್ರದರ್ಶಿಸುವ ಸ್ಥಳವಲ್ಲ. ಇದು ಕುಸ್ತಿ ಕಣ ಅಲ್ಲ' ಎಂದು ರಿಜಿಜು ಸುದ್ದಿಗಾರರಿಗೆ ತಿಳಿಸಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಜಯ್‌ ಶುಕ್ಲಾ, 'ಸಾರಂಗಿ ಹಣೆಯ ಮೇಲೆ ತೀವ್ರ ಗಾಯವಾಗಿದ್ದು, ಅದಕ್ಕೆ ಹೊಲಿಗೆ ಹಾಕಲಾಗಿದೆ. ಅವರಿಗೆ ರಕ್ತಸ್ರಾವವಾಗಿದೆ. ಅವರ ರಕ್ತದೊತ್ತಡ ಹೆಚ್ಚಾಗಿತ್ತು. ರಜಪೂತ್ ಅವರ ತಲೆಗೂ ಗಾಯವಾಗಿದೆ' ಎಂದು ತಿಳಿಸಿದರು.

ಕೇಂದ್ರ ಸಚಿವರಾದ ಶಿವರಾಜ ಸಿಂಗ್ ಚೌಹಾಣ್‌, ಪೀಯೂಷ್‌ ಗೋಯಲ್, ಪ್ರಲ್ಹಾದ ಜೋಶಿ, ಅರ್ಜುನ್ ರಾಮ್ ಮೇಘವಾಲ್ ಅವರು ಆಸ್ಪತ್ರೆಗೆ ತೆರಳಿ ಸಂಸದರ ಆರೋಗ್ಯ ವಿಚಾರಿಸಿದರು.

-ಶಿವರಾಜ ಸಿಂಗ್ ಚೌಹಾಣ್‌, ಕೇಂದ್ರ ಕೃಷಿ ಸಚಿವ ಸಂಸತ್ತಿನ ಒಳಗೆ ರಾಹುಲ್ ದೈಹಿಕ ಶಕ್ತಿಯನ್ನು ಬಳಸುತ್ತಿದ್ದಾರೆ. ನೀವು ಸಂಸತ್ತಿನಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮಾಡಲಿದ್ದೀರಾ? ಆಗ ಕುಸ್ತಿಪಟುಗಳು, ಗೂಂಡಾಗಳು ಸೇರುತ್ತಾರೆ. ಸಂಸತ್ತನ್ನು ಕಾಂಗ್ರೆಸ್‌ ಎಲ್ಲಿಗೆ ಕೊಂಡೊಯ್ಯುತ್ತಿದೆ? ಘಟನೆ ಬಗ್ಗೆ ವಿಪಕ್ಷ ನಾಯಕ ಕ್ಷಮೆಯಾಚಿಸುವ ವಿಶ್ವಾಸ ಇದೆ.'ಖರ್ಗೆ ತಳ್ಳಿದ ಬಿಜೆಪಿ ಸಂಸದರು'

ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ಸಂಸದರು ತಳ್ಳಿದ್ದಾರೆ ಹಾಗೂ ರಾಹುಲ್ ಗಾಂಧಿ ಜತೆಗೆ ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷವು, ಈ ಬಗ್ಗೆ ಸ್ಪೀಕರ್‌ ಓಂ ಬಿರ್ಲಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಖರ್ಗೆ ಅವರೊಂದಿಗೆ ಬಿಜೆಪಿ ಸಂಸದರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಓಂ ಬಿರ್ಲಾ ಅವರಿಗೆ ಖರ್ಗೆ ಹಾಗೂ ಕಾಂಗ್ರೆಸ್‌ ಸಂಸದರು ಪ್ರತ್ಯೇಕ ಪತ್ರಗಳನ್ನೂ ಬರೆದಿದ್ದಾರೆ. ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಹುಲ್ ವಿರುದ್ಧದ ಆರೋಪವನ್ನು, 'ಗೃಹ ಸಚಿವ ಅಮಿತ್ ಶಾ ಉಳಿಸಲು ಮಾಡಿರುವ ಪಿತೂರಿ' ಎಂದು ಬಣ್ಣಿಸಿದ್ದಾರೆ.

ಸಭಾಪತಿಗೆ ಬರೆದ ಪತ್ರದಲ್ಲಿ ಖರ್ಗೆ, 'ನಾನು ಮಕರ ದ್ವಾರ ತಲುಪಿದಾಗ, ಬಿಜೆಪಿ ಸಂಸದರು ನನ್ನನ್ನು ತಳ್ಳಿದರು. ನಾನು ಸಮತೋಲನ ಕಳೆದುಕೊಂಡು ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು' ಎಂದಿದ್ದಾರೆ.

'ಇದರಿಂದಾಗಿ, ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನನ್ನ ಮೊಣಕಾಲುಗಳಿಗೆ ಗಾಯವಾಗಿದೆ. ತರುವಾಯ ಕಾಂಗ್ರೆಸ್ ಸಂಸದರು ಕುರ್ಚಿ ತಂದು ಅದರ ಮೇಲೆ ನನ್ನನ್ನು ಕೂರಿಸಿದರು. ಬಹಳ ಕಷ್ಟದಿಂದ, ಸಹೋದ್ಯೋಗಿಗಳ ಸಹಾಯದಿಂದ ನಾನು 11 ಗಂಟೆಗೆ ಸದನಕ್ಕೆ ಕುಂಟುತ್ತಾ ಬಂದೆ' ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

'ಇದು ವೈಯಕ್ತಿಕವಾಗಿ ನನ್ನ ಮೇಲೆ ಮಾತ್ರವಲ್ಲದೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷರ ಮೇಲೂ ನಡೆದಿರುವ ಹಲ್ಲೆ. ಘಟನೆಯ ಕುರಿತು ತನಿಖೆಗೆ ಆದೇಶಿಸಬೇಕು' ಎಂದು ಖರ್ಗೆ ಅವರು ಸ್ಪೀಕರ್ ಅವರನ್ನು ಒತ್ತಾಯಿಸಿದ್ದಾರೆ.

ಓಂ ಬಿರ್ಲಾ ಅವರನ್ನು ಭೇಟಿ ಮಾಡಿರುವ ಕಾಂಗ್ರೆಸ್‌ ಸಂಸದರು, ಬಿಜೆಪಿ ಸಂಸದರು ಅಮಾನುಷವಾಗಿ ವರ್ತಿಸಿದ್ದಾರೆ ಎಂದು ದೂರಿ ಪತ್ರ ಸಲ್ಲಿಸಿದರು. 'ಆಡಳಿತ ಪಕ್ಷದ ಮೂವರು ಸಂಸದರು ರಾಹುಲ್ ಗಾಂಧಿ ಅವರನ್ನು ದೈಹಿಕವಾಗಿ ಹಿಂಸಿಸಿದ್ದಾರೆ. ಇದು ಪ್ರತಿಪಕ್ಷ ನಾಯಕನ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಈ ಘಟನೆಯು ರಾಹುಲ್ ಅವರ ವೈಯಕ್ತಿಕ ಘನತೆಯ ಮೇಲೆ ಘೋರವಾದ ಆಕ್ರಮಣ. ಸಂಸತ್ತಿನ ಪ್ರಜಾಸತ್ತಾತ್ಮಕ ಮನೋಭಾವಕ್ಕೆ ವಿರುದ್ಧ' ಎಂದು ಅವರು ದೂರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, 'ನಾವು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಮತ್ತು ಜನರು ಮುಕ್ತವಾಗಿ ಪ್ರವೇಶಿಸಲು ಯಾವಾಗಲೂ ಸ್ಥಳಾವಕಾಶವಿದೆ. ಪ್ರತಿದಿನ ಬೆಳಿಗ್ಗೆ 10.30 ರಿಂದ 11 ರವರೆಗೆ ಶಾಂತಿಯುತ ಪ್ರತಿಭಟನೆಗಳು ನಡೆಯುತ್ತಿವೆ. ಇಂದು ಅವರು (ಬಿಜೆಪಿ ಸಂಸದರು) ಮೊದಲ ಬಾರಿಗೆ ಪ್ರತಿಭಟನೆ ನಡೆಸಿದರು. ಎಲ್ಲರನ್ನೂ ತಡೆದು ನಿಲ್ಲಿಸಿ ತಳ್ಳಾಟ ನಡೆಸಿದರು. ಗೂಂಡಾಗಿರಿಯಲ್ಲಿ ತೊಡಗಿದರು' ಎಂದು ಆಕ್ರೋಶ ವ್ಯಕ್ತಪಡಿಸಿದರು. 'ಇದೊಂದು ಷಡ್ಯಂತ್ರ. ನಮ್ಮನ್ನು ತಡೆದವರಿಗೆ 'ಜೈ ಭೀಮ್' ಎಂದು ಸವಾಲು ಹಾಕಿದ್ದೇವೆ. ಅವರು 'ಜೈ ಭೀಮ್' ಘೋಷಣೆಯನ್ನು ಏಕೆ ಕೂಗಿಲ್ಲ' ಎಂದು ಅವರು ಪ್ರಶ್ನಿಸಿದರು.

'ಖರ್ಗೆ ಮತ್ತು ಪ್ರಿಯಾಂಕಾ ಇಬ್ಬರನ್ನೂ ತಳ್ಳಲಾಯಿತು. ಆದರೆ, ಇದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ರಾಹುಲ್ ಹೇಳಿದರು.

-ರಾಹುಲ್‌ ಗಾಂಧಿ, ಲೋಕಸಭೆಯ ವಿಪಕ್ಷ ನಾಯಕ 'ಉದ್ಯಮಿ ಗೌತಮ್ ಅದಾನಿ ಲಂಚ ಪ್ರಕರಣದ ವಿರುದ್ಧ ಅಧಿವೇಶನದ ಮೊದಲ ದಿನದಿಂದಲೂ ನಾವು ಪ್ರತಿಭಟನೆ ನಡೆಸುತ್ತಿದ್ದೆವು. ಇಂದಿನ ಬೆಳವಣಿಗೆ ಅದಾನಿ ವಿಷಯದ ಚರ್ಚೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ. ಪ್ರಧಾನಿ ಮೋದಿ ಅವರ ಸ್ನೇಹಿತನ ವಿರುದ್ಧದ ಪ್ರಕರಣದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಹೊಸ ಗೊಂದಲ ಸೃಷ್ಟಿಸುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries