ನವದೆಹಲಿ: ಪಾಕಿಸ್ತಾನದ ಕಡೆಯಿಂದ ಉಗ್ರರ ಒಳನುಸುಳುವಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಇನ್ನೂ ಎರಡು ತುಕಡಿಗಳನ್ನು ಜಮ್ಮು ಪ್ರದೇಶದಲ್ಲಿ ನಿಯೋಜಿಸಲಾಗಿದೆ.
ಈಚೆಗೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆ ಒಡಿಶಾದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದ ಎರಡು ತುಕಡಿಗಳನ್ನು ಜುಲೈ ಮತ್ತು ಆಗಸ್ಟ್‌ನಲ್ಲಿ ವಾಪಸ್ ಕರೆಸಿಕೊಳ್ಳಲಾಗಿತ್ತು. ಈಗ ಅವನ್ನು ಜಮ್ಮುಗೆ ಕಳುಹಿಸಲಾಗಿದೆ.
ಪಾಕಿಸ್ತಾನದ ಕಡೆಯಿಂದ ಭಾರತಕ್ಕೆ ಒಳನುಸುಳುವವರನ್ನು ತಡೆಯುವುದು ಸವಾಲಿನ ಕೆಲಸವಾಗಿದ್ದು, ಚಳಿಗಾಲಕ್ಕೂ ಮುನ್ನ ಗಡಿಯನ್ನು ಭದ್ರಪಡಿಸುವ ಉದ್ದೇಶದಿಂದ ಸೇನೆಯು ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸಾಂಬಾ, ಜಮ್ಮು ಮತ್ತು ಪಂಜಾಬ್ ಗಡಿ ಪ್ರದೇಶಗಳಲ್ಲಿ ನೂತನ ತುಕಡಿಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದ್ದು, ತಾತ್ಕಾಲಿಕ ಮತ್ತು ಶಾಶ್ವತ ನೆಲೆ, ಗಸ್ತು ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿವೆ.
ಜಮ್ಮುವಿನಲ್ಲಿ ಈ ವರ್ಷ ನಡೆದ ಸರಣಿ ಭಯೋತ್ಪಾದಕ ದಾಳಿಗಳಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸೇನೆಯು ಹಲವು ಉಗ್ರರನ್ನು ಹತ್ಯೆಗೈದಿದೆ.