ದಿ ಹೇಗ್: ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಪರಿಣಾಮಗಳನ್ನು ನಿಯಂತ್ರಿಸಲು ಹಾಗೂ ವಿನಾಶಕಾರಿ ಪರಿಣಾಮ ಎದುರಿಸುತ್ತಿರುವ ದುರ್ಬಲ ರಾಷ್ಟ್ರಗಳಿಗೆ ಆರ್ಥಿಕ ನೆರವು ಒದಗಿಸಲು ಕಾನೂನಾತ್ಮಕವಾಗಿ ಏನು ಮಾಡಬೇಕು ಎಂಬ ಪ್ರಕರಣದ ವಿಚಾರಣೆಯನ್ನು ಅಂತರರಾಷ್ಟ್ರೀಯ ನ್ಯಾಯಾಲಯವು ಪ್ರಾರಂಭಿಸಿದೆ.
ಈ ನ್ಯಾಯಾಲಯದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಪ್ರಕರಣ ಇದಾಗಿದ್ದು, ಎರಡು ವಾರ ವಿಚಾರಣೆ ನಡೆಯಲಿದೆ.
ಸಮುದ್ರದ ನೀರಿನ ಮಟ್ಟ ಏರಿಕೆಯಾದರೆ, ದ್ವೀಪರಾಷ್ಟ್ರಗಳು ಕಣ್ಮರೆಯಾಗುವ ಆತಂಕವಿದ್ದು, ಈ ಪ್ರಕರಣದ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ಒತ್ತಾಯಿಸಿದ್ದವು. ಇದಾದ ಬಳಿಕ, ವಿಶ್ವಸಂಸ್ಥೆಯು 'ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯಗಳ ಬಾಧ್ಯತೆ' ಕುರಿತಂತೆ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಸೂಚಿಸಿತ್ತು.
'ಹವಾಮಾನ ಹಾಳಾಗುವ ನಡಾವಳಿಯನ್ನು ಕಾನೂನುಬಾಹಿರ ಎಂದು ನ್ಯಾಯಾಲಯವು ದೃಢೀಕರಿಸಲಿದೆ ಎಂಬ ನಂಬಿಕೆ ಹೊಂದಿದ್ದೇವೆ' ಎಂದು ಪೆಸಿಫಿಕ್ ದ್ವೀಪರಾಷ್ಟ್ರ 'ವ್ಯಾನುವಟು' ಪರ ಕಾನೂನು ಹೋರಾಟ ನಡೆಸುತ್ತಿರುವ ಮಾರ್ಗರೆಟಾ ವೆವೆರಿಂಕೆ ಸಿಂಗ್ ತಿಳಿಸಿದ್ದಾರೆ.
ಈ ದಶಕದಲ್ಲಿ 2023ರ ವರೆಗೆ ಜಾಗತಿಕವಾಗಿ ಸಮುದ್ರದ ನೀರಿನ ಮಟ್ಟವು ಸರಾಸರಿ 4.3 ಸೆ.ಮೀನಷ್ಟು ಏರಿಕೆಯಾಗಿತ್ತು. ಪೆಸಿಫಿಕ್‌ನಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿತ್ತು. ಕಲ್ಲಿದ್ದಲು ಮೊದಲಾದ ಉರುವಲು ಇಂಧನಗಳ ದಹನದಿಂದ ಕೈಗಾರಿಕಾಪೂರ್ವ ಕಾಲದಿಂದಲೂ ಇಡೀ ವಿಶ್ವದ ತಾಪಮಾನದಲ್ಲಿ 1.3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ.
ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪೆಸಿಫಿಕ್ ದ್ವೀಪರಾಷ್ಟ್ರ 'ವ್ಯಾನುವಟು' ಸೇರಿದಂತೆ ಹಲವು ರಾಷ್ಟ್ರಗಳು ಅಂತರರಾಷ್ಟ್ರೀಯ ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಒತ್ತಾಯಿಸುತ್ತಾ ಬಂದಿವೆ.
ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಶ್ವದ 99 ರಾಷ್ಟ್ರಗಳು ಹಾಗೂ ಡಜನ್‌ಗೂ ಅಧಿಕ ಸರ್ಕಾರೇತರ ಸಂಸ್ಥೆಗಳ ವಾದಗಳನ್ನು ಆಲಿಸಲಾಗುವುದು. ನ್ಯಾಯಾಲಯವು ಆರಂಭಗೊಂಡ 80 ವರ್ಷಗಳಲ್ಲಿಯೇ ಅತಿ ದೊಡ್ಡ ಪ್ರಕರಣ ಇದಾಗಿದೆ.