ಆಗ್ರಾ :ತಾಜ್ ಮಹಲ್ ಸ್ಫೋಟಿಸುವ ಬೆದರಿಕೆ ಸಂದೇಶವು ಇ-ಮೇಲ್ ಮೂಲಕ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ಕಚೇರಿಗೆ ಮಂಗಳವಾರ ಬಂದಿದ್ದು, ಅದು ಹುಸಿ ಎನ್ನುವುದು ಬಳಿಕ ಗೊತ್ತಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಇನ್ನಿತರ ತಂಡಗಳನ್ನು ಸ್ಥಳಕ್ಕೆ ಕರೆಸಿ ಶೋಧ ನಡೆಸಲಾಯಿತು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ತಾಜ್ ಮಹಲ್‌ನ ಭದ್ರತೆ ವಹಿಸಿಕೊಂಡಿರುವ ಎಸಿಪಿ ಸೈಯದ್ ಅರೀಬ್ ಅಹ್ಮದ್ ತಿಳಿಸಿದ್ದಾರೆ.
'ತಾಜ್ ಮಹಲ್ ಸ್ಫೋಟಿಸುವ ಬೆದರಿಕೆಯ ಇ-ಮೇಲ್ ಪ್ರವಾಸೋದ್ಯಮ ಕಚೇರಿಗೆ ಬಂದಿತ್ತು. ಅದನ್ನು ಆಧರಿಸಿ, ಸಿಐಎಸ್‌ಎಫ್, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳವು ತಾಜ್ ಮಹಲ್ ಆವರಣದ ಉದ್ಯಾನಗಳು, ಕಸದ ತೊಟ್ಟಿಗಳು ಮತ್ತು ಇತರ ಪ್ರದೇಶಗಳನ್ನು ಪರಿಶೀಲಿಸಿವೆ. ಸ್ಥಳದಲ್ಲಿ ಏನೂ ಸಿಕ್ಕಿಲ್ಲ' ಎಂದು ಅವರು ಹೇಳಿದ್ದಾರೆ.
ಬಾಂಬ್ ಬೆದರಿಕೆಯ ಇ-ಮೇಲ್ ಬಂದ ಕೂಡಲೇ ಆಗ್ರಾ ಪೊಲೀಸ್ ಮತ್ತು ಎಎಸ್‌ಐ ಗಮನಕ್ಕೆ ತರಲಾಯಿತು ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ದೀಪ್ತಿ ವತ್ಸಾ ತಿಳಿಸಿದ್ದಾರೆ.
ಈ ಹಿಂದೆ, 2021ರ ಮಾರ್ಚ್‌ನಲ್ಲಿ ತಾಜ್‌ಮಹಲ್‌ಗೆ ಇದೇ ರೀತಿ ಬಾಂಬ್ ಬೆದರಿಕೆಯ ಹುಸಿ ಕರೆ ಬಂದಿತ್ತು. ಸಿಐಎಸ್‌ಎಫ್ ಮತ್ತು ತಾಜ್ ಸುರಕ್ಷಾ ಪೊಲೀಸ್ ಸಿಬ್ಬಂದಿ ತಾಜ್ ಮಹಲ್ ಆವರಣವನ್ನು ಪರಿಶೀಲಿಸಿದ್ದರು. ಆಗಲೂ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿರಲಿಲ್ಲ.