ಕಾಶ್ಮೀರ/ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅರಿಪಾಲ್ ತ್ರಾಲ್ ನಲ್ಲಿ ಟೆರಿಟೋರಿಯಲ್ ಆರ್ಮಿ ಯೋಧನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಯೋಧ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗುಂಡಿನ ದಾಳಿ ನಡೆಸಿದ ಉಗ್ರರಿಗಾಗಿ ಸೇನಾ ಹುಡುಕಾಟ ಆರಂಭಿಸಿದ್ದಾರೆ.
ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಗಾಯಗೊಂಡ ಟೆರಿಟೋರಿಯಲ್ ಆರ್ಮಿ ಯೋಧನನ್ನು ಮುಷ್ತಾಕ್ ಅಹ್ಮದ್ ಸೋಫಿ ಅವರ ಪುತ್ರ ಡೆಲ್ಹೇರ್ ಮುಷ್ತಾಕ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಯೋಧ ಸೋಫಿಗುಂದ ಖನಗುಂದ ನಿವಾಸಿ. ಅವರು ಉತ್ತರ ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ನೊಂದಿಗೆ ಸೇವೆ ಸಲ್ಲಿಸುತ್ತಿದ್ದರು. ರಜೆ ಪಡೆದು ತಮ್ಮ ಹಳ್ಳಿಗೆ ಹೋಗಿದ್ದಾಗ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಭಯೋತ್ಪಾದಕರು ಹಾರಿಸಿದ ಗುಂಡು ಯೋಧನ ಕಾಲಿಗೆ ತಗುಲಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದ್ದು ಈ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ.
ಈ ರೀತಿಯ ಹೇಡಿತನದ ಕೃತ್ಯವನ್ನು ಭಯೋತ್ಪಾದಕರು ಮಾಡಿರುವುದು ಇದೇ ಮೊದಲೆನಲ್ಲ. ಬುಧವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೇನಾ ಪೋಸ್ಟ್ ಮೇಲೆ ಭಯೋತ್ಪಾದಕರು ಎರಡು ಗ್ರೆನೇಡ್‌ಗಳನ್ನು ಎಸೆದಿದ್ದು ಅವುಗಳಲ್ಲಿ ಒಂದು ಸ್ಫೋಟಗೊಂಡಿತ್ತು. ಆದರೆ, ಈ ದಾಳಿಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇದಕ್ಕೂ ಮುನ್ನ ಭಯೋತ್ಪಾದಕರು ವೈದ್ಯರನ್ನು ಗುಂಡಿಕ್ಕಿ ಕೊಂದಿದ್ದರು. ಸದ್ಯ ಗುಂಡಿನ ದಾಳಿ ನಡೆಸಿದ ಉಗ್ರರಿಗಾಗಿ ಸೇನೆ ಶೋಧ ಆರಂಭಿಸಿದೆ.