ನವದೆಹಲಿ: ಉತ್ತರ ಪ್ರದೇಶದ ಹಾಶಿಂಪುರ ನರಮೇಧ ಪ್ರಕರಣದ (1987) ಮತ್ತಿಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನು ಒಳಗೊಂಡ ನ್ಯಾಯಪೀಠ ಜಾಮೀನು ಮಂಜೂರು ಮಾಡಿತು.
ಇದೇ ಪ್ರಕರಣದಲ್ಲಿ ಸಮಿ ಉಲ್ಲಾ, ನಿರಂಜನ್ ಲಾಲ್, ಮಹೇಶ್ ಪ್ರಸಾದ್ ಮತ್ತು ಜೈಪಾಲ್ ಸಿಂಗ್ ಸೇರಿದಂತೆ ಜಾಮೀನು ಅರ್ಜಿಗಳ ವಿಚಾರಣೆ ಬಾಕಿ ಇದ್ದ ಒಟ್ಟು 8 ಅಪರಾಧಿಗಳಿಗೆ ಡಿಸೆಂಬರ್ 6 ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
ಪ್ರಕರಣದ ಹಿನ್ನೆಲೆ:
1987ರ ಮೇ 22ರ ಸಂಜೆ ಹಾಶಿಂಪುರ ಮೊಹಲ್ಲಾದ ಮೇಲೆ ದಾಳಿ ಮಾಡಿದ ಪ್ರಾಂತೀಯ ಸಶಸ್ತ್ರ ಪಡೆಯ(ಪಿಎಸಿ) ತುಕಡಿಯೊಂದು ಗ್ರಾಮದ 45 ಮಂದಿ ಮುಸ್ಲಿಮರನ್ನು ಅಪಹರಿಸಿತ್ತು. ಇವರಲ್ಲಿ ಹೆಚ್ಚಿನವರನ್ನು ಗುಂಡು ಹಾರಿಸಿ ಕೊಂದು ಶವಗಳನ್ನು ಗಂಗಾ ಮೇಲ್ದಂಡೆ ನಾಲೆಗೆ ಎಸೆಯಲಾಗಿತ್ತು. ಪೊಲೀಸರ ಗುಂಡೇಟು ತಿಂದರೂ ಐದು ಮಂದಿ ಪ್ರಾಣ ಉಳಿಸಿಕೊಂಡಿದ್ದರು. ಸಶಸ್ತ್ರ ಪಡೆಗಳು ನಡೆಸಿದ ಈ ನರಮೇಧ ಬೆಳಕಿಗೆ ಬಂದ ಮೇಲೆ ನಡೆದ ತನಿಖೆಯಲ್ಲಿ 38 ಮಂದಿಯ ಸಾವನ್ನು ಖಚಿತಪಡಿಸಲಾಗಿತ್ತು.
ಪ್ರಕರಣ ಸಂಬಂಧ ಹತ್ಯೆಗೀಡಾದವರ ಕುಟುಂಬಗಳು ಮತ್ತು ಮಾನವ ಹಕ್ಕು ಸಂಘಟನೆಗಳು ನ್ಯಾಯಾಲಯದ ಮೊರೆ ಹೋದ ಮೇಲೆ 1996ರಲ್ಲಿ 19 ಮಂದಿ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು.
ವಿಚಾರಣಾ ನ್ಯಾಯಾಲಯವು ಸಾಕ್ಷ್ಯ ಆಧಾರಗಳ ಕೊರತೆಯ ಮೇರೆಗೆ ಪಿಎಸಿಯ 16 ಸಿಬ್ಬಂದಿಯನ್ನು 2015ರಲ್ಲಿ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ವಿಚಾರಣಾ ನ್ಯಾಯಾಲಯ ನೀಡಿದ್ದ 2015ರ ಆದೇಶವನ್ನು ಹೈಕೋರ್ಟ್ 2018ರಲ್ಲಿ ರದ್ದುಗೊಳಿಸಿ 16 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.