ನವದೆಹಲಿ: ಸಂವಿಧಾನ ಅಂಗೀಕಾರಗೊಂಡ 75ನೇ ವಸಂತದ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ನೀಡುವ ಕುರಿತು ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಬಿಕ್ಕಟ್ಟು ಶಮನಕ್ಕೆ ಪರಸ್ಪರ ಒಪ್ಪಿಗೆ ವ್ಯಕ್ತವಾಗಿರುವುದರಿಂದ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಶೀಘ್ರದಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದರ ಜತೆಯಲ್ಲೇ ಉದ್ಯಮಿ ಗೌತಮ್ ಅದಾನಿ ಲಂಚ ಹಗರಣ, ಮಣಿಪುರ ಹಾಗೂ ಸಂಭಾಲ್ ಹಿಂಸಾಚಾರ ಪ್ರಕರಣಗಳನ್ನು ಕೂಡಲೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂಬ ವಿರೋಧ ಪಕ್ಷಗಳ ಬಿಗಿಪಟ್ಟನ್ನು ಸರ್ಕಾರ ಪುರಸ್ಕರಿಸಿ, ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದೆನ್ನಲಾಗಿದೆ. ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಒತ್ತಾಯವನ್ನೂ ಪರಿಗಣಿಸುವ ಸಾಧ್ಯತೆ ಇದೆ.
ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ದೋಷಾರೋಪ ಸಲ್ಲಿಕೆ ಹಾಗೂ ಬಂಧನ ವಾರೆಂಟ್ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ. ನ. 25ರಂದು ಸಂಸತ್ ಅಧಿವೇಶನ ಆರಂಭಗೊಂಡಿದ್ದರೂ, ಸಂಭಾಲ್ ಹಿಂಸಾಚಾರ ಹಾಗೂ ಮಣಿಪುರ ಗಲಭೆ ಕುರಿತ ಚರ್ಚೆಗೆ ವಿರೋಧ ಪಕ್ಷಗಳು ಪಟ್ಟು ಸಡಿಲಸದ ಕಾರಣ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಿರಂತರವಾಗಿ ಕಲಾಪ ಮುಂದೂಡಲಾಗಿತ್ತು.
ಕಾಂಗ್ರೆಸ್ ನಿರ್ಣಯಗಳಿಗೆ ಒಪ್ಪಿಗೆ ಸೂಚಿಸಲು ಟಿಎಂಸಿ ನಕಾರ
ವಿರೋಧ ಪಕ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಅದಾನಿ ವಿಷಯಕ್ಕೆ ಹೆಚ್ಚು ಒತ್ತು ನೀಡಲಿಲ್ಲ. ಬದಲಿಗೆ ನಿರುದ್ಯೋಗ, ಬೆಲೆ ಏರಿಕೆ ಹಾಗೂ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಕುರಿತು ಕೇಂದ್ರ ಸರ್ಕಾರದ ತಾರತಮ್ಯ ಕುರಿತ ಚರ್ಚೆಗೆ ಪಟ್ಟು ಹಿಡಿದಿದೆ.
ಅಧಿವೇಶನ ಸಂದರ್ಭದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟದ ಜಂಟಿ ಕಾರ್ಯತಂತ್ರ ಸಭೆಗೆ ಟಿಎಂಸಿ ಗೈರಾಗಿತ್ತು. ಕಾಂಗ್ರೆಸ್‌ನ ನಿರ್ಣಯಗಳಿಗೆ ಕೇವಲ ಒಪ್ಪಿಗೆ ಸೂಚಿಸುವ ಸಲುವಾಗಿ ತಾನು ಹಾಜರಾಗಲಾರೆ ಎಂದು ಪಕ್ಷ ಹೇಳಿತ್ತು. ಆದರೆ ಕಾಂಗ್ರೆಸ್ ವಿರುದ್ಧದ ಸಂಚು ಖಂಡಿಸಿ ಒಕ್ಕೂಟದ ಇತರ ಪಕ್ಷಗಳು ಜತೆಗೂಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೋರಾಡಲು ಒಪ್ಪಿಗೆ ಸೂಚಿಸಿದವು.
ಸಂಭಾಲ್ ಘರ್ಷಣೆ, ಅದಾನಿ ಪ್ರಕರಣ ಕುರಿತ ಚರ್ಚೆಗೆ ವಿರೋಧ ಪಕ್ಷಗಳು ಸೋಮವಾರವೂ ಪಟ್ಟು ಹಿಡಿದು ಗದ್ದಲ ನಡೆಸಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.