ಕುಂಬಳೆ: ಮಂಜೇಶ್ವರ ತಾಲೂಕಿನ ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಂಡಳಿ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಪ್ರಚಂಡ ಗೆಲುವು ಸಾಧಿಸಿದ್ದಾರೆ.
ಒಟ್ಟು ಹದಿಮೂರು ಮಂದಿ ನಿರ್ದೇಶಕರ ಪೈಕಿ ವಿವಿಧ ಮೀಸಲು ವರ್ಗಗಳ ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಸಾಮಾನ್ಯ ವರ್ಗದ 7 ನಿರ್ದೇಶಕರ ಆಯ್ಕೆಗೆ ಓರ್ವ ಸ್ವತಂತ್ರ ಅಭ್ಯರ್ಥಿ ಸ್ಪರ್ಧಿಸಿ ಕೇವಲ 73 ಮತ ಪಡೆದಿದ್ದು ಸಹಕಾರ ಭಾರತಿ ಅಭ್ಯರ್ಥಿಗಳು 685 ಕ್ಕೂ ಹೆಚ್ಚು ಮತ ಪಡೆದು ಗೆಲುವು ಸಾಧಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸಹಕಾರ ಭಾರತಿ ಜಿಲ್ಲಾ ಸಂಘಟನಾ ಪ್ರಮುಖ್ ಅಶೋಕ್ ಬಾಡೂರು, ಬ್ಯಾಂಕ್‍ನ ಹಾಲಿ ಅಧ್ಯಕ್ಷ ಜಯಂತ ಪಾಟಾಳಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸುನೀಲ್ ಕುಮಾರ್, ಪುತ್ತಿಗೆ ಪಂಚಾಯಿತಿ ಸಮಿತಿ ಅಧ್ಯಕ್ಷ ಪದ್ಮನಾಭ ಆಚಾರ್ಯ, ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮಿತಿ ಅಧ್ಯಕ್ಷ ಶಂ.ನಾ.ಖಂಡಿಗೆ, ಕಾರ್ಯದರ್ಶಿ ಕೃಷ್ಣ ಮೂರ್ತಿ ನೂಜಿ ಮುಂತಾದವರು ಅಭಿನಂದನ ಸಭೆಯಲ್ಲಿ ಉಪಸ್ಥಿತರಿದ್ದರು.