ವಾಷಿಂಗ್ಟನ್: ಸಿಖ್ ಪ್ರತ್ಯೇಕತಾವಾದಿ ಮತ್ತು ಭಾರತೀಯ ಉದ್ಯಮಿಗೆ ಸಂಬಂಧಿಸಿದ ಪ್ರಕರಣಗಳಿಂದಾಗಿ ಭಾರತ ಮತ್ತು ಅಮೆರಿಕ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳುವ ಶಕ್ತಿ ಉಭಯ ದೇಶಗಳಿಗಿದೆ ಎಂದು ಅಮೆರಿಕ ವಿಶ್ವಾಸ ವ್ಯಕ್ತಪಡಿಸಿದೆ.
ಇತ್ತೀಚಿನ ಬೆಳವಣಿಗೆಗಳು ಉಭಯ ದೇಶಗಳ ಬಾಂಧವ್ಯದ ಮೇಲೆ ಬೀರಿರುವ ಪರಿಣಾಮದ ಕುರಿತ ಪ್ರಶ್ನೆಗೆ ಉತ್ತರಿಸಿದ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು 'ಇದನ್ನು ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳಲು ನಾವು ಶಕ್ತರಾಗಿದ್ದೇವೆ ಎಂಬ ವಿಶ್ವಾಸ ಇದೆ' ಎಂದರು.
'ಸಂಬಂಧಗಳು ಹೆಚ್ಚು ಸಂಕೀರ್ಣ, ವೈವಿಧ್ಯಮಯ ಮತ್ತು ಆಳವಾಗಿವೆ. ಎರಡೂ ಕಡೆಯಿಂದ ಸವಾಲುಗಳಿವೆ. ಅದನ್ನು ನಾವು ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ' ಎಂದು ಹೇಳಿದ್ದಾರೆ.
'ಕಾನೂನು ಸಂಬಂಧಿತ ಸಮಸ್ಯೆಗಳಿದ್ದಾಗ ಆ ಬಗ್ಗೆ ತನಿಖಾಸಂಸ್ಥೆಗಳೇ ಇತ್ಯರ್ಥಪಡಿಸಿಕೊಳ್ಳುತ್ತವೆ. ಶ್ವೇತಭವನ ಅಥವಾ ಆಡಳಿತ ವಿಭಾಗ ಈ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ' ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
'ನಮ್ಮ ನಡುವಿನ ಸಂಬಂಧಗಳು ಬಲವಾಗಿವೆ ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ನಡೆದ ಯತ್ನದಲ್ಲಿ ಭಾರತದ ಅಧಿಕಾರಿಗಳ ಕೈವಾಡವಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಆರೋಪಿಸಿತ್ತು. ಈ ಮಧ್ಯೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಭಾರತದ ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧ ಅಮೆರಿಕದ ನ್ಯಾಯಾಲಯವೊಂದಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.