ಢಾಕಾ: ಅಗರ್ತಲಾದಲ್ಲಿರುವ ಬಾಂಗ್ಲಾದೇಶದ ಕಾನ್ಸುಲೇಟ್ ಮೇಲಿನ ದಾಳಿಯನ್ನು ಖಂಡಿಸಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯ ಮೂರು ಘಟಕಗಳು ಭಾನುವಾರ ಪ್ರತಿಭಟನಾ ಜಾಥಾ ನಡೆಸಿವೆ.
ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಢಾಕಾದಲ್ಲಿರುವ ಭಾರತದ ಹೈ ಕಮಿಷನ್‌ಗೆ ಪ್ರತಿಭಟನಕಾರರು ಜ್ಞಾಪನಾಪತ್ರ ಸಲ್ಲಿಸಿದ್ದಾರೆ.
ಹಿಂದೂ ಅರ್ಚಕ ಚಿನ್ಮಯಿ ಕೃಷ್ಣದಾಸ್ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರು ಅಗರ್ತಲಾದಲ್ಲಿದ್ದ ಉಪ ಹೈಕಮಿಷನ್ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯನ್ನು ಬಾಂಗ್ಲಾ ತೀವ್ರವಾಗಿ ಖಂಡಿಸಿತ್ತು.
ಬಿಎನ್‌ಪಿಯ ವಿದ್ಯಾರ್ಥಿ, ಯುವ ಮತ್ತು ಸ್ವಯಂಸೇವಕ ಘಟಕಗಳ ಕಾರ್ಯಕರ್ತರು ಬ್ಯಾನರ್ ಹಿಡಿದುಕೊಂಡು ಪಕ್ಷದ ಕಚೇರಿಯಿಂದ ಭಾರತದ ಹೈಕಮಿಷನ್ ಕಚೇರಿವರೆಗೆ ಮೆರವಣಿಗೆ ನಡೆಸುತ್ತಿದ್ದರು. ಅವರನ್ನು ರಾಮಪುರ ಪ್ರದೇಶದ ಬಳಿ ಪೊಲೀಸರು ತಡೆದರು.
ಪೊಲೀಸರ ಅನುಮತಿಯ ಮೇರೆಗೆ 6 ಜನರು ಹೈಕಮಿಷನ್ ಒಳಗೆ ಹೋಗಿ ಮನವಿಪತ್ರ ಸಲ್ಲಿಸಿದರು.
ಭಾರತದ ವಸ್ತುಗಳನ್ನು ಬಹಿಷ್ಕರಿಸುವಂತೆ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ಪ್ರತಿಭಟನಕಾರರು ಘೋಷಣೆಗೆಳನ್ನು ಕೂಗಿದರು.