ಬೀಜಿಂಗ್: 'ಬ್ರಿಕ್ಸ್ ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ನಡೆಸಿದ ಸಭೆ ಯಶಸ್ವಿಯಾಗಿದೆ. ಭಾರತ ಮತ್ತು ಚೀನಾ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಆರಂಭಕ್ಕೆ ಈ ಸಭೆ ಮುನ್ನುಡಿಯಾಗಿದೆ' ಎಂದು ಚೀನಾ ಕಮ್ಯುನಿಸ್ಟ್ ಪಾರ್ಟಿಯ (ಸಿಪಿಸಿ) ಹಿರಿಯ ಪದಾಧಿಕಾರಿ ಲಿಯು ಜಿಯಾಂಚಾವೊ ಬುಧವಾರ ಹೇಳಿದ್ದಾರೆ.
ಚೀನಾದಲ್ಲಿ ಭಾರತದ ರಾಯಭಾರಿ ಪ್ರದೀಪಕುಮಾರ್ ರಾವತ್ ಅವರೊಂದಿಗೆ ಮಾತನಾಡುವ ವೇಳೆ ಅವರು ಈ ಮಾತು ಹೇಳಿದ್ದಾರೆ ಎಂದು ಸರ್ಕಾರಿ ಒಡೆತನದ ಮಾಧ್ಯಮ ಹೇಳಿದೆ. ಲಿಯು ಅವರು ಸಿಪಿಸಿಯ ಅಂತರರಾಷ್ಟ್ರೀಯ ವಿಭಾಗದ ಮುಖ್ಯಸ್ಥ.
'ಚೀನಾ ಮತ್ತು ಭಾರತ, ಮಾತುಕತೆ ಆರಂಭಕ್ಕೆ ಮತ್ತೆ ಚಾಲನೆ ನೀಡುವುದರಿಂದ ಎರಡೂ ದೇಶಗಳ ಒಟ್ಟು 280 ಕೋಟಿ ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಸಾಧ್ಯವಾಗಲಿದೆ. ಭೌಗೋಳಿಕವಾಗಿ ದಕ್ಷಿಣದಲ್ಲಿರುವ ದೇಶಗಳಿಗೂ ಇದರಿಂದ ಒಳಿತವಾಗಲಿದೆ ಎಂಬುದಾಗಿ ಲಿಯು ಹೇಳಿದರು' ಎಂದು ಮಾಧ್ಯಮ ವರದಿ ಮಾಡಿದೆ.
ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ಸಂದರ್ಭದಲ್ಲಿ ಮೋದಿ ಹಾಗೂ ಜಿನ್‌ಪಿಂಗ್ ಅವರು ಅಕ್ಟೋಬರ್ 24ರಂದು ಮಾತುಕತೆ ನಡೆಸಿದ್ದರು.