ಜಮ್ಮು: ಹಿಂದುತ್ವ ಎನ್ನುವುದು ಹಿಂದೂ ಧರ್ಮದ ಘನತೆಯನ್ನು ಕುಗ್ಗಿಸುವ ಮತ್ತು ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರನ್ನು ಹಿಂಸಿಸುವ ಕಾಯಿಲೆಯಾಗಿದೆ. ಇದನ್ನು ಬಿಜೆಪಿ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು ಭಾನುವಾರ ಹೇಳಿದ್ದಾರೆ.
'ರಾಮ ನಾಮ ಜಪಿಸಲು ನಿರಾಕರಿಸಿದ ಮುಸ್ಲಿಂ ಯುವಕರಿಗೆ ಚಪ್ಪಲಿಯಿಂದ ಹೊಡೆದಿರುವುದನ್ನು ಅಸಹಾಯಕತೆಯಿಂದ ನೋಡಿ ರಾಮನು ನಾಚಿಕೆಯಿಂದ ತಲೆ ತಗ್ಗಿಸುತ್ತಾನೆ. ಹಿಂದುತ್ವವು ಲಕ್ಷಾಂತರ ಭಾರತೀಯರನ್ನು ಬಾಧಿಸುತ್ತಿರುವ ಮತ್ತು ದೇವರ ಹೆಸರನ್ನು ಕೆಡಿಸುತ್ತಿರುವ ಕಾಯಿಲೆಯಾಗಿದೆ' ಎಂದು ಇಲ್ತಿಜಾ 'ಎಕ್ಸ್' ಮೂಲಕ ಹೇಳಿದ್ದಾರೆ.
ಇಲ್ತಿಜಾ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಕ್ಷಮೆಯಾಚನೆಗೆ ಆಗ್ರಹಿಸಿದೆ.
ಬಳಿಕ ಜಮ್ಮುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಲ್ತಿಜಾ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು. 'ಇಂತಹ ಘಟನೆಗಳು ದೇಶದಲ್ಲಿ ನಡೆಯಲು ಬಿಜೆಪಿಯೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
'ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ವ್ಯತ್ಯಾಸವಿದೆ. ಹಿಂದುತ್ವ ಎಂದರೆ ಧ್ವೇಷ ಭಾವನೆಗೆ ಸಂಬಂಧಿಸಿದ್ದು. 1940ರಲ್ಲಿ ಸಾವರ್ಕರ್ ಹಿಂದುತ್ವವನ್ನು ಹರಡಿದರು. ಇದು ದೇಶದಲ್ಲಿ ಹಿಂದೂಗಳ ಪ್ರಾಬಲ್ಯವನ್ನು ಸ್ಥಾಪಿಸುವ ಮತ್ತು ಹಿಂದೂಗಳಿಂದ ಮತ್ತು ಹಿಂದೂಗಳಿಗಾಗಿ ಭಾರತ ಎಂಬ ತತ್ವವನ್ನು ಪಸರಿಸುವ ಗುರಿಯನ್ನು ಹೊಂದಿತ್ತು' ಎಂದು ಹೇಳಿದರು.
'ರಾಜಕೀಯ ನಿಲುವುಗಳಲ್ಲಿ ವ್ಯತ್ಯಾಸವಿರುತ್ತದೆ. ಆದರೆ, ಕೆಲವರ ಧಾರ್ಮಿಕ ಭಾವನೆಗಳನ್ನು ಗಾಸಿಗೊಳಿಸುವುದು ಸ್ವೀಕಾರಾರ್ಹವಲ್ಲ' ಎಂದು ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ರವೀಂದರ್ ರೈನಾ ಅವರು ಹೇಳಿದ್ದಾರೆ.