ಮಥುರಾ: ಮಥುರಾದಲ್ಲಿ ಎರಡು ಡಜನ್‌ಗೂ ಅಧಿಕ ದನಗಳ ಮೃತದೇಹ ಪತ್ತೆಯಾಗಿವೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಮಥುರಾ-ಬೃಂದಾವನ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.
ಪಿಎಂವಿ ಪಾಲಿಟೆಕ್ನಿಕ್ ಕಾಲೇಜ್‌ನ ಹಿಂಭಾಗದಲ್ಲಿರುವ ಕಾಡು ಪ್ರದೇಶದಲ್ಲಿ ದನಗಳ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ತಡೆದಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳೀಯ ನಿವಾಸಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಯಾತ್ರಿಗಳಿಗೆ ತೊಂದರೆಯಾಗಿದೆ. ಪೊಲೀಸರು ಸತತ ಮನವಿ ಮಾಡಿದರೂ, ಪ್ರತಿಭಟನಾಕಾರರು ಕದಲಲಿಲ್ಲ. ಕೊನೆಗೆ ರಸ್ತೆ ತೆರವುಗೊಳಿಸಲು ಪೊಲೀಸರು ಬಲ ಪ್ರಯೋಗ ಮಾಡಬೇಕಾಯಿತು.
'ದೌಹೆರಾ ಗ್ರಾಮದ ಪಿಎಂವಿ ಕಾಲೇಜಿನ ಹಿಂಬದಿಯಲ್ಲಿರುವ ಕಾಡು ಪ್ರದೇಶದಲ್ಲಿ ದನಗಳ ಮೃತದೇಹ ಪತ್ತೆಯಾಗಿವೆ. ಪಕ್ಕದಲ್ಲಿ ಇರುವ ಜಾನುವಾರು ಮಾಲೀಕರು ಇದನ್ನು ಬಿಸಾಡಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
'ಪೊಲೀಸರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮ ಗೋಹತ್ಯೆ ಹಾಗೂ ಅನೈತಿಕ ಗೋ ಮಾರಾಟ ನಡೆಯುತ್ತಿದೆ. ಕೆಲವು ಗೋಶಾಲೆಯ ಮಾಲೀಕರು ಚರ್ಮ ಸುಲಿದು, ಕಳೆಬರವನ್ನು ಎಸೆಯುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದು' ಎಂದು ಪ್ರತಿಭಟನಾ ಸ್ಥಳದಲ್ಲಿದ್ದ ಜಿಲ್ಲಾ ಗೋರಕ್ಷಾ ಸಮಿತಿಯ ಅಧ್ಯಕ್ಷ ಭರತ್ ಗೌತಮ್ ಹೇಳಿದ್ದಾರೆ.
ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಲ್ಲದೆ ಇಂತಹ ಸಮಸ್ಯೆಗಳ ಬಗ್ಗೆ ಆಡಳಿತ ಕುರುಡಾಗಿದೆ ಎಂದು ಆರೋಪಿಸಿದ್ದಾರೆ. ಒಂದು ಹಂತಕ್ಕೆ ಪ್ರತಿಭಟನೆ ಕೈ ಮೀರಿ ಹೋಗುವ ಪರಿಸ್ಥಿತಿ ತಲುಪಿತ್ತು. ಬಳಿಕ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಧ್ಯಪ್ರದೇಶ ಮಾಡಬೇಕಾಯಿತು.
'ಈ ಪ್ರದೇಶದಲ್ಲಿ ವಾರಾಂತ್ಯದಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿರುತ್ತದೆ. ಇಂತಹ ಅಡಚಣೆಗಳು ಅನಗತ್ಯ ಗೊಂದಲವನ್ನು ಉಂಟುಮಾಡುತ್ತವೆ. ಮನವೊಲಿಕೆಗೆಗೂ ಪ್ರತಿಭಟನಾಕಾರರು ಜಗ್ಗದಿದ್ದಾಗ, ಅನಿವಾರ್ಯವಾಗಿ ಬಲಪ್ರಯೋಗ ಮಾಡಬೇಕಾಯಿತು' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಗರಾಡಳಿತ ಸ್ಥಳದಿಂದ ದನಗಳ ಶವಗಳನ್ನು ತೆರವುಗೊಳಿಸಿದೆ. ಅವುಗಳನ್ನು ಗೌರವದಿಂದ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಅಕ್ಕಪಕ್ಕದಲ್ಲಿರುವ ಗೋಶಾಲೆಗಳ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ.
ರಸ್ತೆ ತಡೆ ಮಾಡಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಿ, ಸಾಮಾನ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.