ಪ್ರಯಾಗ್‌ರಾಜ್: ಮಾಂಸಾಹಾರ ತಂದಿದ್ದ ಆರೋಪದಡಿ ಉಚ್ಚಾಟನೆಗೊಂಡಿರುವ ಮೂವರು ಬಾಲಕರಿಗೆ ಎರಡು ವಾರದ ಒಳಗಾಗಿ ಬೇರೆ ಶಾಲೆಗೆ ಪ್ರವೇಶ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅಮ್ರೋಹಾ ಜಿಲ್ಲಾಡಳಿತಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿದೆ.
ಈ ಕುರಿತು, ಅಮ್ರೋಹಾದ ಸಬ್ರ ಹಾಗೂ ಇತರ ಮೂವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಹಾಗೂ ಎಸ್.ಸಿ.ಶರ್ಮಾ ಅವರು ಇದ್ದ ನ್ಯಾಯಪೀಠ ನಡೆಸಿತು.
'ಸಿಬಿಎಸ್‌ಇ ಮಾನ್ಯತೆ ಹೊಂದಿರುವ ಬೇರೆ ಶಾಲೆಗೆ ಈ ಮಕ್ಕಳನ್ನು ಸೇರಿಸಿ, ಕ್ರಮ ಕೈಗೊಂಡಿರುವ ಕುರಿತು ಅಫಿಡವಿಟ್ ಸಲ್ಲಿಸಬೇಕು' ಎಂದು ಪೀಠ ಸೂಚಿಸಿದೆ.
ಡಿ.17ರಂದು ಹೊರಡಿಸಿರುವ ಆದೇಶದಲ್ಲಿ ಈ ನಿರ್ದೇಶನ ನೀಡಿರುವ ಪೀಠವು, ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿದೆ.
ಮಾಂಸಾಹಾರ ತಂದಿದ್ದಕ್ಕಾಗಿ ಶಾಲೆಯೊಂದರ ಪ್ರಾಂಶುಪಾಲರು ಆಕ್ಷೇಪಿಸಿದ್ದರು ಹಾಗೂ ಈ ಮೂವರು ಬಾಲಕರನ್ನು ಉಚ್ಚಾಟಿಸಿದ್ದರು ಎಂದು ಆರೋಪಿಸಲಾಗಿದೆ.
ಶಾಲೆಯ ಈ ವರ್ತನೆಯಿಂದಾಗಿ ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆ ಉಂಟಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.