ಕಾಸರಗೋಡು: ಕೇರಳ ಸಹಕಾರಿ ನೌಕರರ ಸಂಘ (ಕೆಸಿಇಯು) ರಾಜ್ಯ ಕೌನ್ಸಿಲ್ ಸಭೆ ಡಿ. 14ರಂದು ಚೆರ್ಕಳ ಐ ಮ್ಯಾಕ್ಸ್ ಆಡಿಟೋರಿಯಂನ 'ಪಿ.ರಾಘವನ್ ನಗರ'ದಲ್ಲಿ ನಡೆಯಲಿದೆ ಎಂದು ಕೆಸಿಇಯು ರಾಜ್ಯ ಉಪಾಧ್ಯಕ್ಷೆ ಪಿ.ಜಾನಕಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 9.30ಕ್ಕೆ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಳಮರ ಕರೀಂ ಸಮಾವೇಶ ಉದ್ಘಾಟಿಸುವರು. ಕೆಸಿಇಯು ರಾಜ್ಯಾಧ್ಯಕ್ಷೆ ಪಿ.ಎಂ.ವಹೀದಾ ಅಧ್ಯಕ್ಷತೆ ವಹಿಸುವರು. ಪ್ರಧಾನ ಕಾರ್ಯದರ್ಶಿ ಎನ್.ಕೆ.ರಾಮಚಂದ್ರನ್ ವರದಿ ಮಂಡಿಸುವರು. ರಾಜ್ಯ ಕೌನ್ಸಿಲ್ 41,969 ಸದಸ್ಯಬಲ ಹೊಂದಿದ್ದು, ಇವರ ಪ್ರತಿನಿಧಿಯಾಗಿ 298ಮಂದಿ ಚುನಾಯಿತ ಪ್ರತಿನಿಧಿಗಳುಪಾಲ್ಗೊಳ್ಳುವರು. ಕೇರಳದಲ್ಲಿ ಸಹಕಾರ ಚಳುವಳಿಯು ವಿವಿಧ ಕ್ಷೇತ್ರಗಳಲ್ಲಿ ಮುಮಚೂಣಿಯಲ್ಲಿದ್ದು, ಒಕ್ಕೂಟಗಳು ದೇಶಕ್ಕೆ ಮಾದರಿಯಾಗಿದೆ. ಆದರೆ ಒಕ್ಕೂಟ ವ್ಯವಸ್ಥೆ ಉಲ್ಲಂಘಿಸಿ ಕೇಂದ್ರ ಸರ್ಕಾರ ಬಹು ರಾಜ್ಯ ಸಹಕಾರಿ ಸಂಸ್ಥೆಗಳಿಗೆ ಉತ್ತೇಜನ ನೀಡುವ ಮೂಲಕ ಕೇರಳದ ಸಹಕಾರಿ ಕ್ಷೇತ್ರದಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಕ್ಷೇತ್ರದ ಭವಿಷ್ಯವನ್ನು ಭದ್ರಗೊಳಿಸಲು ಪರಿಷತ್ತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಸಂಘಟನಾ ಸಮಿತಿ ಉಪಾಧ್ಯಕ್ಷ ಟಿ.ಎಂ.ಎ.ಕರೀಂ, ಸಂಚಾಲಕ ಕೆ.ವಿ.ವಿಶ್ವನಾಥನ್, ಬಿ.ಮೋಹನನ್, ಕೆ.ವಿ.ರಮೇಶನ್ ಉಪಸ್ಥಿತರಿದ್ದರು.