ಕಾಸರಗೋಡು: ಜಿಲ್ಲೆಯಲ್ಲಿ ಮೂರನೇ ಹಂತದ ಡಿಜಿಟಲ್ ಸಮೀಕ್ಷೆ ಆರಂಭವಾಗಿದೆ. ಇದರ ಅಂಗವಾಗಿ ಪೆರುಂಬಳ ಗ್ರಾಮದಲ್ಲಿ ಶಾಸಕ ಇ.ಚಂದ್ರಶೇಖರನ್ ಮೂರನೇ ಹಂತದ ಸರ್ವೆಗೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಶಿಬಿರ ಕಚೇರಿಯನ್ನು ಉದ್ಘಾಟಿಸಿದರು. ಸರ್ವೆ ಸಹಾಯಕ ನಿರ್ದೇಶಕ ಆಸಿಫ್ ಅಲಿಯಾರ್ ಯೋಜನೆ ವಿವರಿಸಿದರು. ಸ್ಥಳೀಯಾಡಳಿತ ಪ್ರತಿನಿಧಿಗಳಾದ ಇಬ್ರಾಹಿಂ ಮನ್ಸೂರ್ ಗುರುಕಲ್, ಕೆ. ಕೃಷ್ಣನ್ ಪೆರುಂಬಳ, ರೇಣುಕಾ. ಟಿ, ಮನೋಜ್ ಕುಮಾರ್, ಜಾನಕಿ ಹಾಗೂ ಕಾಸರಗೋಡು ತಹಸೀಲ್ದಾರ್ ಅಜಯನ್ ಮಾತನಾಡಿದರು. ಭೂಮಾಪನ ತಾಂತ್ರಿಕ ಸಹಾಯಕ ಕೆ.ಪಿ.ಗಂಗಾಧರನ್ ಸ್ವಾಗತಿಸಿ, ಸರ್ವೆ ಮೇಲ್ವಿಚಾರಕ ಕೆ.ವಿ.ಪ್ರಸಾದ್ ವಂದಿಸಿದರು.
ಡಿಜಿಟಲ್ ಸಮೀಕ್ಷೆ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಈವರೆಗೆ 29300 ಹೆಕ್ಟೇರ್ ಅಳತೆ ಮಾಡಲಾಗಿದೆ. ಎಲ್ಲರಿಗೂ ಭೂಮಿ, ಎಲ್ಲ ಭೂಮಿಗೆ ದಾಖಲೆ, ಎಲ್ಲ ಸೇವೆಗಳನ್ನು ಸ್ಮಾರ್ಟ್ ಮಾಡುವ ಉದ್ದೇಶದಿಂದ ಕೇರಳ ಸರ್ಕಾರ ಜಾರಿಗೊಳಿಸಿರುವ ಡಿಜಿಟಲ್ ಸಮೀಕ್ಷೆ ಚಟುವಟಿಕೆಗಳು ಜಿಲ್ಲೆಯಲ್ಲಿ ಪ್ರಗತಿಯಲ್ಲಿವೆ. ಮೊದಲ ಹಂತದಲ್ಲಿ ಎಲ್ಲ 18 ಗ್ರಾ.ಪಂ.ಗಳು ಸರ್ವೆ ಸೀಮಾ ನಿಯಮದ ಪ್ರಕಾರ ಸರ್ವೆ ಪೂರ್ಣಗೊಳಿಸಿ ವಿಧಾನಗಳನ್ನು ಪೂರ್ಣಗೊಳಿಸಿದ್ದು, ರಾಜ್ಯದ ಕಂದಾಯ ಆಡಳಿತಕ್ಕೆ ಹಸ್ತಾಂತರಿಸಿದ ಮೊದಲ ಗ್ರಾಮ ಕುಂಬಳೆಯ ಉಜಾರ್-ಉಳುವಾರ್ ಗ್ರಾಮ. ಉಳಿದ ಗ್ರಾಮಗಳು ಅಂತಿಮ ಹಂತದಲ್ಲಿವೆ. ಈಗಾಗಲೇ ಎರಡನೇ ಹಂತದಲ್ಲಿ 19 ಗ್ರಾಮಗಳಲ್ಲಿ ಡಿಜಿಟಲ್ ಸಮೀಕ್ಷೆ ಆರಂಭವಾಗಿದೆ. ಈ ಗ್ರಾಮಗಳಲ್ಲಿ ಸರ್ವೆ ಗಡಿ ಕಾಯಿದೆಯ 9(2)ರ ಪ್ರಕಾರ ಚಟುವಟಿಕೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. 10 ಗ್ರಾಮಗಳಲ್ಲಿ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ.