ಕಾಸರಗೋಡು: ನಾಪತ್ತೆಯಾಗಿದ್ದ ಪ್ಲಸ್‍ಟು ವಿದ್ಯಾರ್ಥಿನಿ ಹಾಗೂ ಈಕೆಯ 18ರ ಹರೆಯದ ಪ್ರಿಯತಮನನ್ನು ಟಿಕೆಟ್ ಪಡೆಯದೆ ರೈಲಲ್ಲಿ ಪ್ರಯಾಣಿಸುತ್ತಿದ್ದ ಮಧ್ಯೆ ಕಾಞಂಗಾಡಿನಿಂದ ಸೆರೆಹಿಡಿಯಲಾಗಿದೆ. ಇಡುಕ್ಕಿ ಜಿಲ್ಲೆಯ ಶಾಂತಂಪಾರೆ ನಿವಾಸಿ ಯುವಕ ಹಾಗೂ ದೇವಿಕುಳಂ ಪೊಲೀಸ್ ಠಾಣೆ ವ್ಯಾಪ್ತಿಯ ಪ್ಲಸ್‍ಟು ವಿದ್ಯಾರ್ಥಿನಿ ಪೊಲೀಸ್ ವಶದಲ್ಲಿರುವವರು. ಇವರ ಜತೆಗಿದ್ದ ತಮಿಳ್ನಾಡು ತಿರುಪುರ್ ನಿವಾಸಿಯನ್ನು ತನಿಖೆ ನಂತರ ಬಿಡುಗಡೆಗೊಳಿಸಲಾಗಿದೆ. ಮೂರು ದಿವಸಗಳ ಹಿಂದೆ ವಿದ್ಯಾರ್ಥಿನಿ ಹಾಗೂ ಈಕೆ ಪ್ರಿಯತಮ ಇಡುಕ್ಕಿಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಶಾಂತಪಾರಂ ಹಾಗೂ ದೇವಿಕುಳಂ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿತ್ತು. ಸೈಬರ್‍ಸೆಲ್ ಮೂಲಕ ಇವರ ಮೊಬೈಲ್ ಸಂಪರ್ಕಿಸಲು ಯತ್ನಿಸಿದರೂ ಸ್ವಿಚ್‍ಆಫ್‍ಆಗಿತ್ತು. ಈ ಮಧ್ಯೆ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿ ಹಾಗೂ ಯುವಕನನ್ನು ಟಿಟಿ ಕಾಞಂಗಾಡಿನಲ್ಲಿ ರೈಲಿನಿಂದ ಇಳಿಸಿ ಪೊಲೀಸ್ ವಶಕ್ಕೊಪ್ಪಿಸಿದ್ದರು. ಇವರ ಜತೆಗಿದ್ದ ತಿರುಪುರ್ ನಿವಾಸಿಯನ್ನೂ ಪೊಲೀಸರ ವಶಕ್ಕೊಪ್ಪಿಸಲಾಗಿತ್ತು. ತಾವು ತಿರುಪುರ್‍ಗೆ ಕೆಲಸಕ್ಕಾಗಿ ತೆರಳುತ್ತಿದ್ದು, ಕೈಯಲ್ಲಿ ಹಣವಿಲ್ಲದ ಕಾರಣ ಟಿಕೆಟ್ ಖರೀದಿಸದೆ ಪ್ರಯಾಣಿಎಬೇಕಾಗಿ ಬಂದಿತ್ತೆಂದು ಜೋಡಿ ಪೊಲಿಸರಲ್ಲಿ ತಿಳಿಸಿದ್ದರು.
ಮೂರೂ ಮಂದಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಜೋಡಿ ಇಡುಕ್ಕಿಯಿಂದ ಪರಾರಿಯಾಗಿ ಮಂಗಳೂರು ತೆರಳಿರುವ ಮಾಹಿತಿ ಲಭಿಸಿತ್ತು. ಅಲ್ಲಿ ಮೂರು ದಿವಸಗಳ ಕಾಲ ಅಲೆದಾಡಿ ಕೈಯಲ್ಲಿದ್ದ ಹಣ ಖಾಲಿಯಾಗಿತ್ತು. ಆಹಾರ ಸೇವಿಸಲೂ ಇವರ ಬಳಿ ಹಣವಿರಲಿಲ್ಲ. ಈ ಮಧ್ಯೆ ತಿರುಪುರ್ ನಿವಾಸಿಯ ಪರಿಚಯವಾಗಿ ಅವರಿಗೆ ಆಹಾರ ತೆಗೆದುಕೊಟ್ಟು, ತಿರುಪುರ್‍ಗೆ ಬಂದಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ರೈಲನ್ನೇರಿದ್ದರು. ಟಿಕೆಟ್ ಖರೀದಿಸದ ವಿಚಾರ ತಿರುಪೂರ್ ನಿವಾಸಿಯೂ ಅರಿತಿರಲಿಲ್ಲ.
ಜೋಡಿಯ ಮನೆಯವರಿಗೆ ಮಾಹಿತಿ ನೀಡಿದ್ದು, ಪೋಷಕರು ಆಗಮಿಸಿದ ನಂತರ ಇಡುಕ್ಕಿ ತಲುಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.