ಕಾಸರಗೋಡು: ಜಿಲ್ಲೆಯ ಬೋವಿಕ್ಕಾನ ಸನಿಹದ ಇರಿಯಣ್ಣಿಯಲ್ಲಿ ಶುಕ್ರವಾರ ಚಿರತೆಯೊಂದು ಕಂಡುಬಂದಿದೆ. ಇರಿಯಣ್ಣಿ ಆಯುರ್ವೇದ ಆಸ್ಪತ್ರೆ ಸನಿಹದ ಮರದಿಂದ ಚಿರತೆ ಜಿಗಿದಿದ್ದು, ಇದನ್ನು ಕಂಡು ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಬೊಬ್ಬಿಡುತ್ತಿದ್ದಂತೆ ಚಿರತೆ ಓಡಿ ಪರಾರಿಯಾಗಿದೆ. ಅದೃಷ್ಟವಶಾತ್ ಮಹಿಳೆ ಚಿರತೆ ದಾಳಯಿಂದ ಪಾರಾಗಿದ್ದಾರೆ. ಇರಿಯಣ್ಣಿಯ ಕುಟ್ಟಿಯಡ್ಕ ಭಾಗಕ್ಕೆ ಚಿರತೆ ಪರಾರಿಯಾಗಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ಮುಳಿಯಾರು ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಇರಿಯಣ್ಣಿ ಪೇಟೆಯಿದ್ದು, ಆಸುಪಾಸು ಹಲವು ಕುಟುಂಬಗಳು ವಾಸಿಸುತ್ತಿದೆ. ಇದು ನಿತ್ಯ ಜನಸಂಚಾರವಿರುವ ಪ್ರದೇಶವಾಗಿದ್ದು, ಹಗಲು ಹೊತ್ತಲ್ಲೇ ಚಿರತೆ ಕಂಡುಬಂದಿರುವುದು ಸ್ಥಳಿಯ ನಾಗರಿಕರ ಆತಂಕ ಹೆಚ್ಚಲು ಕಾರಣವಾಗಿದೆ. ಕಳೆದ ಒಂದು ವಾರದೊಳಗೆ ಇರಿಯಣ್ಣಿ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಐದಕ್ಕೂ ಹೆಚ್ಚುಬಾರಿ ಚಿರತೆ ಕನಿಸಿಕೊಂಡಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.